ಫುಡ್ ಕೋರ್ಟ್‌ನಲ್ಲಿ ಮಂಡಕ್ಕಿ ಸವಿದ ಯುವತಿಯರು.
- ಪೌಷ್ಟಿಕಾಂಶ ಜಾಗೃತಿ ಮೂಡಿಸುವಲ್ಲಿ ವಿಫಲ
- ಸ್ಥಳೀಯ ಖಾದ್ಯಗಳಿಲ್ಲದ ಪ್ರದರ್ಶನ
ಹಂಪಿ: ಹಂಪಿ ಉತ್ಸವದಲ್ಲಿ ಆಹಾರ ಮೇಳ ಆಯೋಜಿಸಲು ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಆಹಾರಗಳನ್ನು ಪರಿಚಯಿಸಲು ಮತ್ತು ಮಾರಾಟ ಮಾಡಲು ಹೋಟೆಲ್ ಹಾಗೂ ಆಹಾರ ತಯಾರಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಶುಕ್ರವಾರ ಫುಡ್ ಕೋರ್ಟ್ ಅನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಉದ್ಘಾಟಿಸಿದರು.
ಗಾಯತ್ರಿ ಪೀಠ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ಶೆಡ್‌ಗಳನ್ನು ನಿರ್ಮಿಸಿ ಆಹಾರ ಮೇಳ ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ರಿಯಾಯಿತಿ ದರದಲ್ಲಿ ಶುಚಿ ಮತ್ತು ರುಚಿಯಾದ ಆಹಾರವನ್ನು ನಿಗದಿತ ಸ್ಥಳದಲ್ಲಿಯೇ ತಯಾರಿಸಿ ವಿತರಿಸಬೇಕು ಹಾಗೂ ಸ್ಥಳೀಯ, ವಿಶೇಷ ಹಾಗೂ ಜನಪ್ರಿಯ ಪ್ರಾದೇಶಿಕ ಭೋಜನ ಉಣಬಡಿಸಬೇಕು ಎಂದು ಅರ್ಜಿ ಆಹ್ವಾನಿಸಲಾಗಿತ್ತು.
ಆದರೆ, ಆಹಾರ ಮೇಳದಲ್ಲಿ ಬಗೆಬಗೆಯ ತಿಂಡಿ, ತಿನಿಸುಗಳನ್ನು ಮಾರಾಟಕ್ಕೆ ಇಡಬೇಕಿದ್ದರೂ ಮಿಠಾಯಿ, ಪೆಪ್ಪರ್‌ಮಿಂಟ್, ಚಕ್ಕುಲಿ, ಕೋಡುಬಳೆ, ಲಡ್ಡು, ಚುರುಮುರಿಗಳು ಕಂಡು ಬರಲಿಲ್ಲ. ಸೌತೆಕಾಯಿ, ತೆಂಗಿನ ಕಾಯಿ, ಹೀರೇಕಾಯಿ, ಬೆಂಡೆ ಕಾಯಿ, ಮೂಲಂಗಿ, ಟೊಮೆಟೊ ಸೇರಿದಂತೆ ಇತರ ತರಕಾರಿಗಳು ಹಾಗೂ ವಿವಿಧ ಸೊಪ್ಪುಗಳನ್ನು ಮಾರಾಟ ಮಾಡಲಿಲ್ಲ. ಸಪೋಟ, ಮೂಸಂಬಿ, ಕಿತ್ತಳೆ, ಪಪ್ಪಾಯಿ, ಬಾಳೆ ಹಣ್ಣುಗಳ ಮಾರಾಟವಂತೂ ಇರಲೇ ಇಲ್ಲ.
ನುರಿತ ವ್ಯಾಪಾರಿಗಳಂತೆ ಚೌಕಾಸಿ ಮಾಡುತ್ತಾ ಮಾರಾಟ ಮಾಡುವವರು ಇಲ್ಲಿ ಕಾಣಲಿಲ್ಲ. ಹೀಗಾಗಿ ಪಾಲಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಮಗೆ ಅಗತ್ಯವಾದ ಹಣ್ಣು, ತರಕಾರಿ ಮತ್ತು ತಿನಿಸುಗಳನ್ನು ಖರೀದಿಸಲಿಲ್ಲ. ಮಕ್ಕಳಿಗೆ ಶುದ್ಧ ಹಾಗೂ ಪೌಷ್ಟಿಕ ಆಹಾರ ಸೇವನೆಯ ಅಗತ್ಯದ ಕುರಿತು ಜಾಗೃತಿಯನ್ನೂ ಮೂಡಿಸಲಿಲ್ಲ. ರಾಗಿ, ಅಕ್ಕಿ, ಗೋಧಿ ಸೇರಿದಂತೆ ವಿವಿಧ ಕಾಳುಗಳಿಂದ ಮಾಡಿದ ಖಾದ್ಯಗಳು ಇಲ್ಲಿ ಕಾಣಿಸಲಿಲ್ಲ. ಬೀದಿಬದಿಯ ತಿಂಡಿಗಳನ್ನು ಬಿಟ್ಟರೆ ಆಹಾರ ಮೇಳ ಎಂದು ಬಂದ ಜನರಿಗೆ ನಿರಾಶೆಯಾಯಿತು.