ಬೆಂಗಳೂರು: "ಹ್ವಾಯ್.. ಎಂತ ಮರಾಯ್ರೆ?, ಎಲ್ಲ ಹ್ಯಾಂಗಿದ್ರಿ?" ಎಂಬ ಆತ್ಮೀಯ ನುಡಿಗಳಲ್ಲೇ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊತ್ತು ತರುವ ಸುಂದರ ಭಾಷೆಯೇ ಕುಂದಾಪ್ರ ಕನ್ನಡ. ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ಭಾಗಗಳಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಈ ಭಾಷೆಗೆ ತನ್ನದೇ ಆದ ವಿಶಿಷ್ಟ ವ್ಯಾಕರಣ, ಪದಬಳಕೆ ಹಾಗೂ ಎಂಥವರನ್ನೂ ತಕ್ಷಣವೇ ಆಕರ್ಷಿಸುವ ಸೊಗಡಿದೆ. ಪ್ರತಿವರ್ಷ ಆಟಿ ಅಮಾವಾಸ್ಯೆಯಂದು (ಆಷಾಢ ಅಮಾವಾಸ್ಯೆ) ಜಗತ್ತಿನಾದ್ಯಂತ ಇರುವ ಕುಂದಾಪುರದ ಜನತೆ ಅತ್ಯಂತ ಸಂಭ್ರಮದಿಂದ ಆಚರಿಸುವ ದಿನವೇ ಈ ಕುಂದಾಪ್ರ ಕನ್ನಡ ದಿನ.
ತಮ್ಮ ಮಾತೃಭಾಷೆಯ ಕುಂದಾಪ್ರ ಕನ್ನಡವನ್ನು ಎತ್ತಿಹಿಡಿಯಲು, ಕರಾವಳಿಯ ವಿಶಿಷ್ಟ ಆಹಾರ ಪದ್ಧತಿ, ಜಾನಪದ ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಎಲ್ಲೇ ಇರಲಿ, ಎಷ್ಟೇ ಎತ್ತರಕ್ಕೆ ಬೆಳೆಯಲಿ, ಯಾವುದೇ ಕ್ಷೇತ್ರಗಳಲ್ಲೇ ಇರಲಿ, ತಮ್ಮ ಭಾಷಾ ಪ್ರೇಮವನ್ನು ಹೆಮ್ಮೆಯಿಂದ ಜಗತ್ತಿಗೆ ಸಾರುವ ಕುಂದಾಪುರದವರ ಈ ಭಾಷಾ ಹಬ್ಬವು ಕೇವಲ ಒಂದು ಆಚರಣೆಯಷ್ಟೇ ಅಲ್ಲ, ಅದು ಕರಾವಳಿ ಕನ್ನಡಿಗರ ಒಗ್ಗಟ್ಟು ಮತ್ತು ಹೆಮ್ಮೆಯ ಪ್ರತೀಕವಾಗಿದೆ ಎಂಬುದಕ್ಕೆ ಕನ್ನಡ ಚಿತ್ರರಂಗ, ರಾಜಕೀಯ ಮತ್ತು ಹಲವು ಕ್ಷೇತ್ರಗಳ ಗಣ್ಯರಿಂದ ಹರಿದುಬಂದಿರುವ ಶುಭಾಶಯಗಳ ಮಹಾಪೂರವೇ ಸಾಕ್ಷಿ.
"ಆಟಿ ಅಮಾವಾಸ್ಯೆಯು ಕರಾವಳಿಯ ಕೃಷಿ ಸಂಸ್ಕೃತಿ ಮತ್ತು ಆರೋಗ್ಯ ಪರಂಪರೆಯಲ್ಲಿ ಮಹತ್ವದ ದಿನವಾಗಿದೆ. ಈ ದಿನದಂದೇ ಜಗತ್ತಿನಾದ್ಯಂತ ನೆಲೆಸಿರುವ ಕುಂದ ಕನ್ನಡ ಭಾಷಿಕರು ತಮ್ಮ ಮಾತೃಭಾಷೆಯ ಸೊಗಡು, ತಿನಿಸುಗಳು ಹಾಗೂ ಸಂಸ್ಕೃತಿಯನ್ನು ಸಂಭ್ರಮಿಸುವುದು ನಾಡಿನ ವೈವಿಧ್ಯತೆಗೆ ಸಾಕ್ಷಿ. ನಮ್ಮ ನೆಲದ ಭಾಷಾ ವೈವಿಧ್ಯತೆ ಹಾಗೂ ಆಚಾರ-ವಿಚಾರಗಳನ್ನು ಮುಂಬರುವ ಪೀಳಿಗೆಗೆ ತಲುಪಿಸುವ ಪ್ರತಿಜ್ಞೆ ಮಾಡೋಣ. ಕುಂದಾಪ್ರ ಕನ್ನಡ ದಿನ ಹಾಗೂ ಆಟಿ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು" ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭಹಾರೈಸಿದ್ದಾರೆ.
"ನಮ್ಮ ಊರು, ನಮ್ಮ ಜನ, ನಮ್ಮ ಸಂಸ್ಕೃತಿ, ನಮ್ಮ ಕರಾವಳಿಯ ಮಣ್ಣಿನ ಸೊಗಡು, ನಮ್ಮ ಕುಂದಾಪ್ರ ಕನ್ನಡದ ಸೊಗಸು, ನಮ್ಮ ಆಚರಣೆಗಳೇ ನಮ್ಮ ಹೆಮ್ಮೆ. ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಯ ಈ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೂ ಹೆಮ್ಮೆಯಿಂದ ತಲುಪಿಸೋಣ. ಕುಂದಾಪ್ರ ಕನ್ನಡ ದಿನ ಹಾಗೂ ಆಟಿ ಅಮಾವಾಸ್ಯೆಯ ಹಾರ್ದಿಕ ಶುಭಾಶಯಗಳು" ಎಂದು ಕನ್ನಡ ಚಿತ್ರನಟ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಏನಿದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ?
ಆಸಾಡಿ ಅಮಾಸಿ/ ಆಟಿ ಅಮಾವಾಸ್ಯೆ (ಕರ್ಕಾಟಕ ಅಮಾವಾಸ್ಯೆ) ದಿನ ಕರಾವಳಿಗರಿಗೆ ಅತ್ಯಂತ ವಿಶೇಷವಾದದ್ದು. ಕಳೆದ ಏಳು ವರ್ಷಗಳಿಂದ ಪ್ರತಿ ವರ್ಷ ಈ ಕರ್ಕಾಟಕ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದ್ದು, ಈ ಸಲ ಆಗಸ್ಟ್ 12ರಂದು ಆಷಾಢ ಅಮಾವಾಸ್ಯೆ ಬಂದಿದೆ. ಇಂದು ಕುಂದಾಪುರದಲ್ಲಿ ವಿಶೇಷವಾಗಿ ಈ ದಿನಾಚರಣೆ ನಡೆದಿದ್ದು, ಬೆಂಗಳೂರಿನಲ್ಲಿ ಆಗಸ್ಟ್ 15ರಂದು ವಿಜಯನಗರದ ಬಂಟರ ಸಂಘದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನ ಪ್ರಯುಕ್ತ ಹಲವು ಕಾರ್ಯಕ್ರಮಗಳು ನಡೆಯಲಿವೆ.