ಹಡಗಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ದುಸ್ಥಿತಿಯಾಗಿರುವುದು ಮತ್ತು ಶಾಲೆಯಲ್ಲಿ ಕಿತ್ತು ಹೋದ ಶಾಲೆ ಕಿಟಕಿ ಬಾಗಿಲು. 
ರಾಜ್ಯ

ಕಲಿಕೆಗೆ ಕುತ್ತಾದ ಹಡಗಲಿ ಸರ್ಕಾರಿ ಶಿಥಿಲ ಶಾಲೆ..!

ಪ್ರಮುಖ ಮುಖ್ಯಾಂಶಗಳು

  • ಕಟ್ಟಡ ದುರಸ್ತಿಗೆ ಇಚ್ಛಾಶಕ್ತಿ ಕೊರತೆ
  • ಸ್ಥಳೀಯ ಶಾಸಕರು ಗಮನಹರಿಸಲಿ
  • ಪಾಲಕರು, ವಿದ್ಯಾರ್ಥಿಗಳಲ್ಲಿ ಆತಂಕ
ಹಡಗಲಿ: ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕೊಠಡಿಗಳು ಹದಗೆಟ್ಟು ಮಕ್ಕಳು ಅಪಾಯ ಎದುರಿಸುತ್ತಿದ್ದರೂ ಸಂಬಂಧಿಸಿದ ಜನಪ್ರತಿನಿಧಿಗಳು ಕ್ಯಾರೆ ಎನ್ನದಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೂವರೆ ವರ್ಷದಿಂದ ಶಾಲೆ ಇದೇ ದುಸ್ಥಿತಿಯಲ್ಲಿ ಮುಂದುವರಿದಿರುವುದು ಸೋಜಿಗವಾದರೂ ದಿಟವಾಗಿದೆ.
ಒಂದರಿಂದ ಎಂಟನೇ ತರಗತಿವರೆಗೆ ನಡೆಯುವ ಈ ಶಾಲೆಯಲ್ಲಿ 124 ವಿದ್ಯಾರ್ಥಿನಿಯರು ಸೇರಿ 270ಕ್ಕೂ ಅಧಿಕ ಮಕ್ಕಳಿದ್ದಾರೆ. ಒಟ್ಟು 9 ಕೊಠಡಿಗಳಿವೆ. 9 ಕೊಠಡಿಗಳ ಪೈಕಿ 2 ಕೊಠಡಿಗಳು ಸಂಪೂರ್ಣ ಹಾಳಾಗಿವೆ.
ಈ ಕೊಠಡಿಗಳ ಕಂಬಿಗಳು ಶಿಥಿಲವಾಗಿದ್ದು ಮಳೆಯಾದರೆ ಗೋಡೆಯಲ್ಲಿ ನೀರು ಇಳಿಯುತ್ತದೆ. ಇದರಿಂದ ಗೋಡೆಗಳು ನೆನೆದು ಯಾವುದೇ ಸಂದರ್ಭದಲ್ಲಿ ಬೀಳುವ ಹಂತದಲ್ಲಿವೆ. ತರಗತಿ ನಡೆದಾಗ ಗೋಡೆ ಬಿದ್ದರೆ ಏನು ಗತಿ? ಎಂಬ ಆತಂಕ ಪಾಲಕರು, ಶಿಕ್ಷಕರನ್ನು ಕಾಡುತ್ತಿದೆ. ಸ್ವಲ್ಪ ಮಳೆಯಾದರೂ ಸೋರುತ್ತ ಮಕ್ಕಳು ಕುಳಿತುಕೊಳ್ಳದ ಸ್ಥಿತಿ ನಿರ್ಮಾಣವಾಗುತ್ತಿದೆ.
ಉಳಿದ ಮೂರು ಕೊಠಡಿಗಳಲ್ಲಿ ದುರಸ್ತಿಗೊಂಡಿದ್ದು, ಕಿಟಕಿ ಬಾಗಿಲುಗಳು ಕಿತ್ತು ಹೋಗಿವೆ. ಅಲ್ಲಲ್ಲಿ ಛಾವಣಿ ಸಿಮೆಂಟ್
ಕಿತ್ತು ಹೋಗಿದ್ದು, ಗೋಡೆ ಸಿಮೆಂಟ್ ಉದುರುತ್ತಿದೆ. ನೆಲಹಾಸು ಕೂಡ ಹದಗೆಟ್ಟಿದೆ.
ಇರುವುದರಲ್ಲೇ ಗಟ್ಟಿಮುಟ್ಟಾಗ ಕೊಠಡಿಗಳಲ್ಲಿ ತರಗತಿ ನಡೆಸುತ್ತ ದುರಸ್ತಿ ಇರುವ ಕೋಣೆಯನ್ನೇ ಕಚೇರಿಯನ್ನಾಗಿ ಮಾಡಿಕೊಂಡು ಅಂಗೈಯಲ್ಲಿ ಜೀವ ಹಿಡಿದುಕೊಂಡು ಕೆಲಸ ಮಾಡುವುದು ಅನಿವಾರ್ಯ ಶಿಕ್ಷಕರಿಗೆ ಎದುರಾಗಿದೆ.
ಈ ಕುರಿತು ಅನೇಕ ಬಾರಿ ಗ್ರಾ.ಪಂ. ಅಧ್ಯಕ್ಷರಿಗೆ ತಿಳಿಸಲಾಗಿದೆ. ಮನವಿ ಕೂಡ ನೀಡಲಾಗಿದೆ. ಅವರು ಕೂಡ ಶಾಸಕರ ಗಮನ ಸೆಳೆಯುವುದಾಗಿ ಹೇಳುತ್ತಿದ್ದಾರೆ. ಒಂದೂವರೆ ವರ್ಷದಿಂದ ಸಮಸ್ಯೆ ಮುಂದುವರಿದಿದ್ದರೂ ಕೋಣೆಗಳ ದುರಸ್ತಿಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಸಣ್ಣಪುಟ್ಟ ದುರಸ್ತಿಗಳಿದ್ದರೆ ನಾವೇ ಮಾಡಿಸಿಕೊಳ್ಳುತ್ತೇವೆ ಎನ್ನುವ ಶಿಕ್ಷಕ ಸಿಬ್ಬಂದಿ ಕೂಡ ಸೋರುವ ಕೊಠಡಿಗಳನ್ನು ಕೂಡುವ ಮಕ್ಕಳನ್ನು ನೋಡಿ ಅಸಹಾಯಕರಾಗಿ ನಿಲ್ಲುವಂತಾಗಿದೆ.
ಆದಷ್ಟು ಬೇಗ ಶಾಲೆ ಸ್ಥಿತಿ ಸುಧಾರಿಸದಿದ್ದರೆ ಮಕ್ಕಳ ಹಿತದೃಷ್ಟಿಯಿಂದ ಬೀದಿಗಿಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಪಾಲಕರು ಹರಿಹಾಯುತ್ತಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಶಾಲೆಯತ್ತ ಗಮನಿಸಿ ದುರಸ್ತಿಗೆ ಕ್ರಮ ಕೈಗೊಳ್ಳುವರೇ ಕಾಯ್ದು ನೋಡಬೇಕಿದೆ.

ಕ್ಯಾರೆ ಎನ್ನದ ಕ್ಷೇತ್ರದ ಶಾಸಕರು

ಈ ಗ್ರಾಮ ಶಾಸಕ ವಿಠ್ಠಲ ಕಟಕಧೋಂಡ ಅವರ ಮತಕ್ಷೇತ್ರ ವ್ಯಾಪ್ತಿಯಲ್ಲಿದೆ. ಗ್ರಾ.ಪಂ. ನವರು ಕೂಡ ಶಾಲೆ ಸ್ಥಿತಿ ಬಗ್ಗೆ ಅವರ ಗಮನ ಸೆಳೆದಿದ್ದಾರೆ. ಇದೇ ಗ್ರಾಮದ ಮೂಲಕ ಅನೇಕ ಬಾರಿ ಸಂಚರಿಸುವ ಶಾಸಕರು ಮಕ್ಕಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದೂವರೆ ವರ್ಷದಿಂದ ಅದೇ ರಾಗ ಅದೇ ಹಾಡು ಎನ್ನುವಂತಾಗಿದ್ದು, ಅಪಾಯ ಸಂಭವಿಸಿ ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಎಂಬ ಆತಂಕ ಪಾಲಕರಲ್ಲಿ ಮೂಡಿದೆ. ಆದಷ್ಟು ಬೇಗ ಶಾಸಕರು ಗಮನ ಹರಿಸಿ ಶಾಲೆ ದುರಸ್ತಿಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಮಕ್ಕಳು ನಿರ್ಭಯವಾಗಿ ಕಲಿಯುವಂತೆ ಮಾಡಬೇಕು ಎಂದು ಗ್ರಾಮಸ್ತರು ಆಗ್ರಹಿಸಿದ್ದಾರೆ.