ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಭಕ್ತ ಸಾವು
- ಮಲೆಮಹದೇಶ್ವರ ಬೆಟ್ಟ- ತಾಳುಬೆಟ್ಟ ಮಾರ್ಗದಲ್ಲಿ ಚಿರತೆ ದಾಳಿಗೆ ಭಕ್ತರೊಬ್ಬರೂ ಬಲಿ
- ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಚಿರತೆ ದಾಳಿಗೆ ಬಲಿಯಾದ ಪಾದಯಾತ್ರಿ
- ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಂದ ಮೃತ ದೇಹ ಪತ್ತೆ
ಚಾಮರಾಜನಗರ: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ( Male Mahadeshwara Hills ) - ತಾಳುಬೆಟ್ಟ ಮಾರ್ಗದಲ್ಲಿ ಬುಧವಾರ ಚಿರತೆ ದಾಳಿಗೆ ಕಾಲ್ನಡಿಗೆ ಭಕ್ತರೊಬ್ಬರೂ ಬಲಿಯಾಗಿದ್ದಾರೆ.
ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ ಚಿರತೆ ದಾಳಿಗೆ ಬಲಿಯಾದ ಪಾದಯಾತ್ರಿ.
ಚೀರನಹಳ್ಳಿ ಗ್ರಾಮದ ಸುಮಾರು ಮೂವತ್ತಕ್ಕೂ ಹೆಚ್ಚು ಗ್ರಾಮದ ಜನರ ತಂಡ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದರು. ಈ ವೇಳೆ ಚಿರತೆ ಕಾಣಿಸಿಕೊಂಡಿದೆ. ಇದನ್ನು ಕಂಡು ಗಾಬರಿಗೊಂಡ ಭಕ್ತರ ತಂಡ ದಿಕ್ಕಪಾಲಾಗಿ ಓಡಿದ್ದಾರೆ. ಈ ವೇಳೆ ಪ್ರವೀಣ್ ಅವರ ಮೇಲೆ ದಾಳಿ ನಡೆಸಿದ ಚಿರತೆ ಅರಣ್ಯ ಪ್ರದೇಶಕ್ಕೆ ಎಳೆದು ಸಾಯಿಸಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹವನ್ನು ಪತ್ತೆ ಹಚ್ಚಿ ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಚಿರತೆ ದಾಳಿ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ನಾಲ್ಕು ದಿನದ ಮಟ್ಟಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಾಯಾತ್ರೆಯನ್ನು ಸ್ಥಗಿತಗೊಳಿಸಿದೆ. ಚಿರತೆಯನ್ನು ಸೆರೆಹಿಡಿಯುವರೆಗೂ ಪಾದಾಯಾತ್ರೆಗೆ ಬ್ರೇಕ್ ಹಾಕಿದೆ. ಆದರೂ, ಈ ಒಂದು ಘಟನೆ ಪಾದಯಾತ್ರೆಯಲ್ಲಿ ತೆರೆಳುವ ಭಕ್ತರಲ್ಲಿ ಭಯ ಹುಟ್ಟಿಸಿದೆ.