ಕೆಂಗೇರಿ ಉಪನಗರದ ಬಿ. ಎನ್. ಗೋಪಾಲ್ ಮತ್ತು ಮಂಜುಳಾ ದಂಪತಿ 
ರಾಜ್ಯ

ವಿಳಂಬ ಸೂಚನೆ ಉಳಿಸಿತು ಜೀವ

ಗೋವಿಂದರಾಜು ಚಿನ್ನಕುರ್ಚಿ
ಬೆಂಗಳೂರು: ಮಾನಸ ಸರೋವರ ಮತ್ತು ಕೈಲಾಸ ಪರ್ವತ ಯಾತ್ರೆಯಲ್ಲಿ ತಾಂತ್ರಿಕ ಕಾರಣಕ್ಕೆ ಒಂದು ದಿನ ಪ್ರವಾಸ ತಡವಾದ ಹಿನ್ನೆಲೆಯಲ್ಲಿ ನಮ್ಮ ಜೀವ ಉಳಿಯಿತು. ಇಲ್ಲವಾಗಿದ್ದರೆ ಜಲಪ್ರಳಯಕ್ಕೆ ತುತ್ತಾಗಬೇಕಿತ್ತು ಎಂದು ಕೆಂಗೇರಿ ಉಪನಗರದ ಬಿ. ಎನ್. ಗೋಪಾಲ್ ಮತ್ತು ಮಂಜುಳಾ ದಂಪತಿ ಮಾಹಿತಿ ಹಂಚಿಕೊಂಡಿದ್ದಾರೆ.
ಆ.15ಕ್ಕೆ ಆರು ಮಂದಿ ಕನ್ನಡಿಗರು ಹಾಗೂ ವಿವಿಧ ರಾಜ್ಯಗಳ 54 ಯಾತ್ರಿಕರು ತೆರಳಿದ್ದೆವು. ನೇಪಾಳದ ಕಾಠ್ಮಂಡು ತಲುಪಿ ಅಲ್ಲಿಂದ ಚೀನಾ ಮತ್ತು ನೇಪಾಳದ ಗಡಿಭಾಗ ಗೈರಾಂಗ್‌ನಲ್ಲಿ (ಜಲಪ್ರಳಯಕ್ಕೆ ಸಿಲುಕಿದ ಸ್ಥಳ) ರಾಯಭಾರ ಕಚೇರಿಯಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಪರಿಶೀಲನೆ ನಡೆಸಲಾಯಿತು. ಯಾತ್ರೆ ಮುಗಿಸಿಕೊಂಡು ಚೀನಾದ ಸಾಗಾ ನಗರಕ್ಕೆ ವಾಪಸ್ ಬಂದಿದ್ದೆವು. ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಲ್ೀ ಹಾಲಿಡೇಸ್ ಸಿಬ್ಬಂದಿ,
ಬುಧವಾರ ಗೈರಾಂಗ್ ರಾಯಭಾರಿ ಕಚೇರಿಗೆ ಹೋಗಲು ಸಾಧ್ಯವಿಲ್ಲ. ಗುರುವಾರಕ್ಕೆ ಟೈಮ್ ಸಿಕ್ಕಿದೆ. ಸಾಗಾದಲ್ಲೇ ಉಳಿಯಬೇಕೆಂದು ಹೇಳಿದ್ದರು. ಆದ್ದರಿಂದ ಗೈರಾಂಗ್‌ನಿಂದ 70 ಕಿ.ಮೀ. ದೂರದ ಸಾಗಾ ನಗರದಲ್ಲಿ ವಿಶ್ರಾಂತಿ ಪಡೆದೆವು. ಪೂರ್ವನಿಗದಿಯಂತೆ ಗೈರಾಂಗ್ ರಾಯಭಾರ ಕಚೇರಿಗೆ ಹೋಗಿದ್ದರೆ 54 ಜನರು ಜಲಪ್ರಳಯಕ್ಕೆ ಸಿಲುಕಿಕೊಳ್ಳಬೇಕಾಗಿತ್ತು ಎಂದು ಗೋಪಾಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಸದ್ಗುರು ಬಚಾವ್

ಸದ್ಗುರು ಅವರ ಈಶ ೌಂಡೇಶನ್‌ನಿಂದ ಯಾತ್ರ್ರಿಗಳ ತಂಡಗಳು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದವು. ಮೊದಲ ತಂಡದೊಂದಿಗೆ ಸದ್ಗುರು ವಾಪಸ್ ಸಾಗಾ ನಗರಕ್ಕೆ ಬಂದು ಉಳಿದಿದ್ದರು. ಯಾತ್ರಿಗಳ ತಂಡವೊಂದು ಇಮಿಗ್ರೇಷನ್ ಕಚೇರಿಗೆ ತಲುಪಿತ್ತು. ಅವರ ಭೇಟಿಗೆ ಸದ್ಗುರು ಹೋಗಬೇಕಿತ್ತು. ನಮ್ಮನ್ನು ತಡೆದಂತೆ ಸದ್ಗುರು ಅವರನ್ನೂ ತಡೆದ ಕಾರಣ ನಮ್ಮೊಂದಿಗೆ ಅವರು ವಿಶ್ರಾಂತಿಗೆ ಜಾರಿದರು. ಗುರುವಾರ ಇಮಿಗ್ರೇಷನ್ ಕಚೇರಿಗೆ ಹೋಗಬೇಕಿತ್ತು. ಅಷ್ಟರಲ್ಲಿ ದುರಂತ ಸಂಭವಿಸಿತು ಎಂದು ಬಿ.ಎನ್. ಗೋಪಾಲ್ ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಹಿಂತಿರುಗಲು ಬಿಡದ ಚೀನಾ

ಸಾಗಾದಿಂದ ನೇಪಾಳದ ಕಾಠ್ಮಂಡುಗೆ ಅಂದಾಜು 200 ಕಿಲೋಮೀಟರ್ ಇದೆ. ಜಲಪ್ರಳಯದಿಂದ ಗೈರಾಂಗ್ ಇಮಿಗ್ರೇಷನ್ ಕಚೇರಿ ಕೊಚ್ಚಿ ಹೋಗಿದೆ. ತಾತ್ಕಾಲಿಕ ಇಮಿಗ್ರೇಷನ್ ಕಚೇರಿ ತೆರೆದಿರುವ ಚೀನಾ, ಯಾತ್ರಿಗಳ ಪ್ರಯಾಣಕ್ಕೆ ಅವಕಾಶ ಕೊಡುತ್ತಿಲ್ಲ. ಆದ್ದರಿಂದ ಚೀನಾದ ಸಾಗಾದಲ್ಲಿಯೇ ಉಳಿಯುವ ಸ್ಥಿತಿ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ವಾಪಸ್ ಕರೆಸಿಕೊಳ್ಳಬೇಕೆಂದು ಶಿಕ್ಷಕ ಗೋಪಾಲ್ ಮನವಿ ಮಾಡಿದ್ದಾರೆ.