K N Rajanna | ಮಾಜಿ ಸಚಿವ ಕೆ.ಎನ್.ರಾಜಣ್ಣ  
ರಾಜ್ಯ

ನಾಯಕತ್ವ ಬದಲಾವಣೆ ಬಗ್ಗೆ ಇಂದು ನಿರ್ಧಾರ ಸಾಧ್ಯತೆ...ಸಿದ್ದರಾಮಯ್ಯ ಬದಲಾದರೆ ಜಿ. ಪರಮೇಶ್ವರ್ ಸಿಎಂ ಆಗಲಿ ಎಂದ ರಾಜಣ್ಣ! | K N Rajanna

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಆಗುವುದಾದರೆ, ಅವರ ಸ್ಥಾನಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಸೂಕ್ತ ವ್ಯಕ್ತಿಯಾಗಿದ್ದು, ಅವರೇ ಸಿಎಂ ಆಗಲಿ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ರಾಜ್ಯ ಸರ್ಕಾರದ 3ನೇ ವರ್ಷದ ಸಂಭ್ರಮದ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, ಜಿ. ಪರಮೇಶ್ವರ್ ಅವರು ಸಿಎಂ ಆಗಲು ಸಾಧನಾ ಸಮಾವೇಶ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, ಹೌದು, ನಾವು ಅದನ್ನೇ ಬಯಸುತ್ತೀವಿ ಎನ್ನುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದರು.
2013 ರಲ್ಲಿ ಜಿ ಪರಮೇಶ್ವರ್ ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಸ್ಥಾನವನ್ನು ಪರಮೇಶ್ವರ್ ಅವರಿಗೆ ಬಿಟ್ಟು ಕೊಡುತ್ತಿದ್ದರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಬಿಟ್ಟುಕೊಡದೆ ಇರಲು ಸಿಎಂ ಸ್ಥಾನ ಸಿದ್ದರಾಮಯ್ಯ ಸೇರಿದಂತೆ ಯಾವುದೇ ರಾಜಕಾರಣಿಯ ಮನೆ ಆಸ್ತಿ ಅಲ್ಲ, ಅದು ಜನರು ಕೊಡುವ ಭಿಕ್ಷೆ ಎಂದರು.
ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ ರಾಜಣ್ಣ, ಇವತ್ತು ಕೇರಳದಲ್ಲಿ ಕರ್ನಾಟಕದ ನಾಯಕತ್ವ ಬದಲಾವಣೆ ಬಗ್ಗೆ ನಿರ್ಣಯವಾಗಬಹುದು. ಹೈಕಮಾಂಡ್ ಜತೆ ತುಂಬಾ ಹೊತ್ತು ಸಿಎಂ ಸಮಯ ಕಳೆಯುವುದರಿಂದ ಈ‌ ವೇಳೆ ನಾಯಕತ್ವದ ಬಗ್ಗೆ ತೀರ್ಮಾನ ಆಗಬಹುದು, ಸಿದ್ದರಾಮಯ್ಯನವರೇ ಮುಂದುವರಿಯಲಿ ಎನ್ನುವುದು ನನ್ನ ಅಭಿಪ್ರಾಯವಾಗಿದ್ದು, ಒಂದು ವೇಳೆ ಬದಲಾವಣೆ ಆದರೆ, ಜಿ ಪರಮೇಶ್ವರ್ ಆ ಸ್ಥಾನಕ್ಕೆ ಸೂಕ್ತ ಎಂದರು.