ಸಿದ್ದಾಪುರದ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರುಗಳನ್ನು ಮೊಹರಂ ಹಬ್ಬದ ಅಂತಿಮ ದಿನ ನಿಮಿತ್ತ ಶುಕ್ರವಾರ ಮೆರವಣಿಗೆ ನಡೆಸಿ ದಫನ್ ಮಾಡಲಾಯಿತು. 
ರಾಜ್ಯ

ಮೊಹರಂಗೆ ಸಂಭ್ರಮದ ತೆರೆ

ಸಿದ್ದಾಪುರ: ಗ್ರಾಮದಲ್ಲಿ ಕಳೆದ 10 ದಿನಗಳಿಂದ ಭಕ್ತಿ, ಭಾವೈಕ್ಯದಿಂದ ಜರುಗಿದ ಮೊಹರಂ ಆಚರಣೆಗೆ ಶುಕ್ರವಾರ ಸೌಹಾರ್ದಯುತ ತೆರೆ ಬಿದ್ದಿತು.
ಹಿಂದೂ-ಮುಸ್ಲಿಂ ಬಾಂಧವ್ಯದ ಪ್ರತೀಕವಾಗಿರುವ ಹಬ್ಬದಲ್ಲಿ ಜಾತಿ-ಮತ ಬೇಧವಿಲ್ಲದೆ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಂಭ್ರಮದಿಂದ ಹಬ್ಬದ ಆಚರಿಸಿದರು. 
ಕೊನೇ ದಿನದ ನಿಮಿತ್ತ ಶುಕ್ರವಾರ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪೀರಲು ದೇವರುಗಳನ್ನು ಸಂಜೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಉದ್ದಕ್ಕೂ ಭಕ್ತಿಪೂರ್ವಕವಾಗಿ ಅಲಾಯಿ ದೇವರಿಗೆ ಮಂಡಕ್ಕಿ ಎಸೆದು ಸಾರ್ವಜನಿಕರು ಭಕ್ತಿ ಸಮರ್ಪಿಸಿದರು.
ಯುವಕರು, ವೃದ್ಧರು ಸಾಂಪ್ರದಾಯಿಕ ಅಲಾಯಿ ಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಭದ್ರತೆ ಕೈಗೊಂಡಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ದೇವರುಗಳನ್ನು ಸಾಂಪ್ರದಾಯಿಕವಾಗಿ ಹಳ್ಳದಲ್ಲಿ ಕೊಂಡೊಯ್ದು ವಿಸರ್ಜನೆ ಮಾಡುವ ಮೂಲಕ ಹಬ್ಬ ಮುಕ್ತಾಯಗೊಂಡಿತು.