ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ಶಾಂತಿ ಕುಟೀರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಧ್ವಾಚಾರ್ ಮೊಕಾಶಿ, ನಿರ್ಮಲಾ ಸುರಪುರ, ಎನ್.ಎಂ. ಬಿರಾದಾರ, ಶ್ರೀಕೃಷ್ಣ ಗುರೂಜಿ ಇತರರಿದ್ದರು.
- ಹಿರಿಯ ವಿದ್ವಾಂಸ ಮಧ್ವಾಚಾರ್ ಮೊಕಾಶಿ ಅಭಿಮತ
- ಉಚಿತ ಬೇಸಿಗೆ ಶಿಬಿರದ ಸಮಾರೋಪ
ವಿಜಯಪುರ: ನಮ್ಮಲ್ಲಿನ ಸುಪ್ತ ಶಕ್ತಿಗಳಾದ ಇಚ್ಛಾಶಕ್ತಿ, ಜ್ಞಾನಶಕ್ತಿ ಹಾಗೂ ಕ್ರಿಯಾಶಕ್ತಿಗಳು ಬದುಕಿನ ಯಶಸ್ಸಿಗೆ ಅತ್ಯಗತ್ಯ. ಗುರುಗಳು ನೀಡುವ ಅಮೂಲ್ಯವಾದ ಜ್ಞಾನ ಮತ್ತು ಆಧ್ಯಾತ್ಮಿಕ ಶಕ್ತಿಯು ನಮ್ಮ ಆತ್ಮವನ್ನು ಜಾಗೃತಗೊಳಿಸುತ್ತದೆ ಎಂದು ಹಿರಿಯ ವಿದ್ವಾಂಸ ಮಧ್ವಾಚಾರ್ ಮೊಕಾಶಿ ಅಭಿಪ್ರಾಯಪಟ್ಟರು.
ಜಿಲ್ಲೆಯ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ ಶಾಂತಿ ಕುಟೀರ ಟ್ರಸ್ಟ್, ಭಾರತೀಯ ಸುರಾಜ್ಯ ಸಂಸ್ಥೆ ಹಾಗೂ ಸಂಡೂರಿನ ಶ್ರೀ ಶೈಲೇಶ್ವರ ವಿದ್ಯಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಚ್ಛೆಗೆ ಅನುಗುಣವಾಗಿ ಕ್ರಿಯಾಶಕ್ತಿಯು ಪೂರಕವಾಗಿ ಕೆಲಸ ಮಾಡುತ್ತದೆ. ಇಲ್ಲಿ ಪಡೆದ ಜ್ಞಾನ ನಿಮ್ಮನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತದೆ ಎಂದರು.
ಮಹಿಳಾ ಮತ್ತು ಬಾಲ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ನಿರ್ಮಲಾ ಸುರಪುರ ಮಾತನಾಡಿ, ಅಜ್ಞಾನ ಹೋಗಲಾಡಿಸಲು ಶಿಕ್ಷಣ ಅನಿವಾರ್ಯ. ಮಕ್ಕಳಿಗೆ ಕೇವಲ ಪಠ್ಯವಲ್ಲದೆ, ಕ್ರೀಡೆ ಹಾಗೂ ಜೀವನ ಕೌಶಲಗಳನ್ನು ಕಲಿಸುವ ಅಗತ್ಯವಿದೆ. ಶಿಸ್ತು ಮತ್ತು ಸಂಯಮ ಕಲಿಸುವ ಇಂತಹ ಶಿಬಿರಗಳು ಗ್ರಾಮೀಣ ಭಾಗದ ಮಕ್ಕಳಿಗೆ ಲಭಿಸುತ್ತಿರುವುದು ಶ್ಲಾಘನೀಯ ಎಂದರು.
ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಉಚಿತವಾಗಿ ಬ್ಯಾಗ್, ನೋಟ್ ಪುಸ್ತಕ, ಕಂಪಾಸ್ ಬಾಕ್ಸ್, ಪೆನ್, ಪೆನ್ಸಿಲ್ ಹಾಗೂ ಸ್ಲಿಪ್ಪರ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಬಿರಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳ ಯೋಗ ಪ್ರದರ್ಶನ ಮಂತ್ರ ಮುಗ್ಧಗೊಳಿಸಿತು. ‘ಕೊಳೂರು ಕೊಡಗೂಸು’ ನಾಟಕ ಹಾಗೂ ಸಾಂಪ್ರದಾಯಿಕ ’ಕೋಲಾಟ’ ನೃತ್ಯಗಳು ನೆರೆದಿದ್ದ ಪಾಲಕರ ಮನ ಗೆದ್ದವು.
ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ. ಬಿರಾದಾರ, ಗುರುಮನೆತನದ ಹಿರಿಯರಾದ ಡಾ. ಸತೀಶ್ ಕನ್ನೂರ, ಶಾಂತಿ ಕುಟೀರ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಹೇತಿ, ಸದಸ್ಯೆ ಅಸ್ಮಿತಾ ಓಕ, ರಾಮರಾಜ್ಯ ಕಲಾಮೇಳದ ಅಧ್ಯಕ್ಷ ಶ್ರೀಕೃಷ್ಣ ಗುರೂಜಿ, ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್. ನಾನಾವಟೆ, ಭಾರತೀಯ ಸುರಾಜ್ಯ ಸಂಸ್ಥೆ ಅಧ್ಯಕ್ಷ ಬಿ.ಬಿ. ಪೂಜಾರ ಹಾಗೂ ಶ್ರೀನಿವಾಸ ಕುಲಕರ್ಣಿ, ಆಶ್ರಮದ ನಿವಾಸಿಗಳು ಹಾಗೂ ಶಿಕ್ಷಕರು, ಶಿಬಿರಾರ್ಥಿಗಳು ಮತ್ತು ನೂರಾರು ಪಾಲಕರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಗೆ, ಪಾಲಕರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.