ಯಾದಗಿರಿ: ಮುಂಬರುವ ದಿನಗಳಲ್ಲಿ ನಗರಸಭೆ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದ ಮುಖ್ಯರಸ್ತೆಯೊಂದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಮಾರ್ಗ ಎಂದು ನಾಮಕರಣ ಮಾಡಲು ಸಂಕಲ್ಪ ಮಾಡಿದ್ದಾಗಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ಪಾಟೀಲ್ ನಾಯ್ಕಲ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಗೆ ಬಿಎಸ್ವೈ ಕೊಡುಗೆ ಅಪಾರವಿದೆ. ಜಿಲ್ಲಾ ಕೇಂದ್ರ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಅತಿ ಹೆಚ್ಚಿನ ಅನುದಾನ ನೀಡಿದ್ದಾರೆ. ಜಿಲ್ಲೆಯ ಜನರು ಅವರ ಸಹಕಾರ ಎಂದಿಗೂ ಮರೆಯುವಂತಿಲ್ಲ ಎಂದು ಹೇಳಿದರು.
ರೈತರ, ದಿನದಲಿತರ, ಶೋಷಿತರ ಮತ್ತು ಮಹಿಳೆಯರ ಏಳಿಗೆಗೆ ಅನೇಕ ಹೊಸ ಯೋಜನೆಗಳು ಜಾರಿ ಮಾಡುವ ಮೂಲಕ ಯಡಿಯೂರಪ್ಪ ಅವರು, ನಾಡು ಕಂಡ ಅಭಿವೃದ್ಧಿ ಪರ ಸಿಎಂ ಆಗಿದ್ದಾರೆ. ಮಠ, ಮಾನ್ಯಗಳಿಗೆ ವಿಶೇಷ ಅನುದಾನ ನೀಡುವ ಮೂಲಕ ಧರ್ಮ ಪರಂಪರೆ ಉಳಿಸಿ ಬೆಳೆಸುವಲ್ಲಿ ಅವರ ಕೊಡುಗೆ ಯಾರು ಮರೆಯಲಾಗದು. ಚಿತ್ರದುರ್ಗದಲ್ಲಿ ನಡೆಯುವ 50 ಸಂಭ್ರಮೋತ್ಸವಕ್ಕೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ತೆರಳಲಿದ್ದೇವೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಭೀಮನಗೌಡ ಖ್ಯಾತನಾಳ, ಮಾಜಿ ತಾಪಂ ಮಾಜಿ ಸದಸ್ಯ ಶರಣಭೂಪಾಲರೆಡ್ಡಿ ಗುರುಸುಣಗಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಮಹಿಳಾ ಮೋರ್ಚಾ ರಾಜ್ಯ ರಾಜಕಾರಣಿ ಸದಸ್ಯೆ ವೀಣಾ ಮೋದಿ, ಮಹಿಳಾ ಮೋರ್ಚಾ ಜಿಲ್ಲಾಧ್ಯೆ ಸುನಿತಾ ಚವ್ಹಾಣ್, ಭೀಮರೆಡ್ಡಿಗೌಡ ಚಟ್ನಳ್ಳಿ, ಮಲ್ಲನಗೌಡ ಬಿಳ್ಹಾರ, ಶಿವರಾಜ ಪಾಟೀಲ್, ಉದಯ ರಾಯಕೋಟಿ, ಜಿಲ್ಲಾ ಮಾಧ್ಯಮ ಸಂಚಾಲಕ ವಿರೂಪಾಯ್ಯ ಸ್ವಾಮಿ ಹೆಡಗಿಮದ್ರ, ಜಿಲ್ಲಾ ಬಿಜೆಪಿ ಸಹ ಸಂಚಾಲಕ ಚಂದ್ರಶೇಖರ್ ಕಡೆಸೂರ, ಮಲ್ಲು ಕೋಲಿವಾಡ ಇತರರಿದ್ದರು.