ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಬಂಪರ್ ಗಿಫ್ಟ್​! ತುಟ್ಟಿಭತ್ಯೆ ಶೇ.18ಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ 
ರಾಜ್ಯ

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಬಂಪರ್ ಗಿಫ್ಟ್​! ತುಟ್ಟಿಭತ್ಯೆ ಶೇ.18ಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ರಾಜ್ಯ ಸರ್ಕಾರವು ದೀಪಾವಳಿ ಹಬ್ಬಕ್ಕೆ ಬಂಪರ್ ಕೊಡುಗೆಯನ್ನೇ ನೀಡಿದೆ. ನೌಕರರಿಗೆ ತುಟ್ಟಿಭತ್ಯೆಯನ್ನು (DA) ಶೇ.2.25 ರಷ್ಟು ಹೆಚ್ಚಿಸಿ ಎಂದು ಅಧಿಕೃತ ಆದೇಶ ಹೊರಡಿಸಿದೆ.

ಈ ಪರಿಷ್ಕರಣೆಯೊಂದಿಗೆ ಹಾಲಿ ಇರುವ ತುಟ್ಟಿಭತ್ಯೆ ದರವು ಮೂಲ ವೇತನದ ಶೇ.15.75ರಿಂದ ಶೇ.18ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರು ಹಾಗೂ ರಾಜ್ಯದ ಸಂಚಿತ ನಿಧಿಯಿಂದ ಪಿಂಚಣಿ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ಪಿಂಚಣಿದಾರರಿಗೂ ಸಹ ಮೂಲ ಪಿಂಚಣಿಯ ಶೇ.15.75ರಿಂದ ಶೇ.18ರಷ್ಟು ಹೆಚ್ಚಳ ಅನ್ವಯವಾಗಲಿದೆ.

ಈ ಆದೇಶದ ಮೇರೆಗೆ ಹೆಚ್ಚಳವಾಗಿರುವ ತುಟ್ಟಿಭತ್ಯೆಯ ಬಾಕಿ ಮೊತ್ತವನ್ನು 2026ರ ನವೆಂಬರ್ ತಿಂಗಳ ವೇತನ/ಪಿಂಚಣಿ ನಿಗದಿಗಿಂತ ಮುಂಚಿತವಾಗಿ ನಗದು ರೂಪದಲ್ಲಿ ಪಾವತಿಯಾಗಲಿದೆ. 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸಂಬಳ ಪಡೆಯುತ್ತಿರುವ ರಾಜ್ಯ ಸರ್ಕಾರಿ, ಜಿಲ್ಲಾ ಪಂಚಾಯತಿಗಳ ಪೂರ್ಣಾವಧಿ ನೌಕರರಿಗೆ ಇದು ಅನ್ವಯವಾಗಲಿದೆ.

ಯಾರಿಗೆಲ್ಲ ಅನ್ವಯ?

  • 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರು.

  • ಜಿಲ್ಲಾ ಪಂಚಾಯತಿಗಳ ಪೂರ್ಣಾವಧಿ ನೌಕರರು

  • ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರು

  • ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ನೌಕರರು.

  • ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ನಿವೃತ್ತರಾದ ರಾಜ್ಯ ಪಿಂಚಣಿದಾರರು