ಸಾಂದರ್ಭಿಕ ಚಿತ್ರ 
ರಾಜ್ಯ

ತೃತೀಯ ಲಿಂಗಿಗಳ ಆಟಾಟೋಪಕ್ಕೆ ಬ್ರೇಕ್

ಪ್ರಮುಖ ಮುಖ್ಯಾಂಶಗಳು

  • ಬಲವಂತದ ವಸೂಲಿ ತಡೆಯಲು ಪೊಲೀಸರಿಗೆ ಡಿಜಿಪಿ ಸೂಚನೆ

ಸುನೀಲ್ ಹರಿಹರ

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುವ, ಅಮಾಯಕರ ಮೇಲೆ ದೌರ್ಜನ್ಯ ಎಸಗುವ ಹಾಗೂ ಶುಭ-ಸಮಾರಂಭಗಳಿಗೆ ನುಗ್ಗಿ ಹಣಕ್ಕಾಗಿ ಪೀಡಿಸುವ ತೃತೀಯ ಲಿಂಗಿಗಳ ಆಟಾಟೋಪಕ್ಕೆ ಕಡಿವಾಣ ಹಾಕುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಗೆ ವಹಿಸಿದೆ. ಇವರಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ನಿಯಂತ್ರಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ಕೊಡಲಾಗಿದೆ.
ಅಮಾಯಕರಿಗೆ ಕಿರುಕುಳ ನೀಡುತ್ತಿರುವ ಕುರಿತು ಗೃಹ ಸಚಿವರಿಗೆ ಹಲವು ದೂರುಗಳು ಸಲ್ಲಿಕೆಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ರವಾನಿಸಿದ್ದಾರೆ. ರಾಜ್ಯದ ಎಲ್ಲ ಪೊಲೀಸ್ ಆಯುಕ್ತರು, ವಲಯಗಳ ಪೊಲೀಸ್ ಮಹಾನಿರೀಕ್ಷಕರು ಮತ್ತು ಪೊಲೀಸ್ ಅಧೀಕ್ಷಕರಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿಪಿ ಸೂಚಿಸಿದ್ದಾರೆ.
ತೃತೀಯ ಲಿಂಗಿಗಳು, ಬೆಂಗಳೂರು ಸೇರಿ ಎಲ್ಲ ನಗರಗಳಲ್ಲಿ ಜನರಿಗೆ ಹಣ ಕೊಡುವಂತೆ ಪೀಡಿಸಿ, ಅಸಭ್ಯವಾಗಿ ವರ್ತಿಸುತ್ತಿರುವ ಪ್ರಕರಣಗಳು ವರದಿಯಾಗಿವೆ. ಹಣ ನೀಡದಿದ್ದರೆ ಬಲವಂತವಾಗಿ ವಸೂಲಿ ಮಾಡುವ ಜತೆಗೆ ಶಾಪ ಹಾಕಿಯೂ ಹೆದರಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಸಭ್ಯ ವರ್ತನೆ

ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ, ಚಿತ್ರಮಂದಿರಗಳು ಹಾಗೂ ಹೆದ್ದಾರಿಗಳ ರೋಡ್ ಹಂಪ್‌ಗಳ ಬಳಿ ವಾಹನಗಳನ್ನು ತಡೆದು ಹಣ ಕೇಳುತ್ತಿದ್ದಾರೆ. ಕಡಿಮೆ ಕೊಟ್ಟರೆ ಹೆಚ್ಚು ಹಣಕ್ಕೆ ಪೀಡಿಸುತ್ತಾರೆ. ಕೆಲವರು ಜನರ ಜೇಬಿಗೆ ಕೈ ಹಾಕಿ ಕಿತ್ತುಕೊಳ್ಳುತ್ತಿದ್ದಾರೆ. ಇನ್ನೂ ಅಸಭ್ಯವಾಗಿ ವರ್ತಿಸುತ್ತಿರುವ ಪ್ರಕರಣಗಳು ವರದಿಯಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಗರ ಹೊರಭಾಗ, ಬಸ್ ನಿಲ್ದಾಣಗಳ ಸಮೀಪ ಹಾಗೂ ಬೈಪಾಸ್‌ಗಳಲ್ಲಿ ಕನಿಷ್ಠ 10ರಿಂದ 15 ತೃತೀಯಲಿಂಗಿಗಳು ಗುಂಪು ಕಟ್ಟಿಕೊಂಡು ಪುರುಷರಿಗೆ ಲೈಂಗಿಕವಾಗಿ ಪ್ರಚೋದಿಸುತ್ತಿದ್ದು, ಇದರಿಂದಾಗಿ ಯುವಕರು ಅಡ್ಡದಾರಿ ತುಳಿಯುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಸ್ಥಳಗಳಲ್ಲಿ ಕೆಲವು ಸಲ ಹಣ ಕಿತ್ತುಕೊಂಡು ಹಲ್ಲೆ ನಡೆಸಿ ಪರಾರಿಯಾದ ಕೃತ್ಯಗಳೂ ನಡೆದಿವೆ.

ಕನಿಷ್ಠ ₹5 ಸಾವಿರ ವಸೂಲಿ

ತೃತೀಯಲಿಂಗಿಗಳು ಶುಭ ಸಮಾರಂಭ ನಡೆಯುವ ಸ್ಥಳಗಳನ್ನು ಗುರುತಿಸಿಕೊಂಡಿದ್ದಾರೆ. ಅಲ್ಲಿ ಮದುವೆ ಅಥವಾ ಇತರ ಸಮಾರಂಭ ನಡೆಯುತ್ತಿದ್ದರೆ ಗುಂಪು ಕಟ್ಟಿಕೊಂಡು ಒಳ ನುಗ್ಗುತ್ತಾರೆ. ಆಶೀರ್ವಾದ ಮಾಡುವ ನೆಪದಲ್ಲಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಡುತ್ತಾರೆ. ಆಗ ಸಾವಿರ, 2 ಸಾವಿರ ರೂ. ನೀಡಿದರೂ ಅದನ್ನು ತಿರಸ್ಕರಿಸಿ 5ರಿಂದ 10 ಸಾವಿರಕ್ಕೆ ಬೇಡಿಕೆ ಇಟ್ಟು, ಕನಿಷ್ಠ 5 ಸಾವಿರ ವಸೂಲಿ ಮಾಡಿಯೇ ಅಲ್ಲಿಂದ ತೆರಳುತ್ತಾರೆ.

ಗೌರವ ಬದುಕು ನಡೆಸಿ

ಸಂವಿಧಾನದಡಿ ತೃತೀಯ ಲಿಂಗಿಗಳಿಗೆ ಸಮಾನ ಹಕ್ಕುಗಳಿವೆ. ಸುಪ್ರೀಂ ಕೋರ್ಟ್‌ನ ‘ನಾಲ್ಸಾ’ ತೀರ್ಪಿನ ಪ್ರಕಾರ, ಗೌರವಯುತವಾಗಿ ಬದುಕುವ ಹಕ್ಕು ಹೊಂದಿದ್ದಾರೆ. ಆದರೆ, ಈ ಹಕ್ಕನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ಕಿರುಕುಳ ನೀಡುವುದನ್ನು ಕಾನೂನು ಬೆಂಬಲಿಸುವುದಿಲ್ಲ. ಅಸಭ್ಯ ವರ್ತನೆ ಮತ್ತು ಕಿರುಕುಳವನ್ನು ಸಮರ್ಥಿಸಿಕೊಳ್ಳಲಾಗದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.