ಕೆಂಭಾವಿ ವಲಯದ ವಿವಿಧ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿ ವಿವಿಧ ಅಭಿವೃದ್ಧಿ ಕಾರ್ಯ ಕುರಿತು ಶಾಸಕ ಶರಣಬಸಪ್ಪ ದರ್ಶನಾಪುರ ಚರ್ಚಿಸಿ ಮಾತನಾಡಿದರು. ಶರಣಪ್ಪ ಸಲಾದಪುರ, ಶಿವಮಹಾಂತ ಚಂದಾಪುರ, ಬಸನಗೌಡ ಯಾಳಗಿ ಇತರರಿದ್ದರು. 
ರಾಜ್ಯ

ಗ್ರಾಪಂಗೊಂದು ಭಾರತ್ ಜೋಡೋ ಸಂಘ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿಕೆ
  • ಕೆಂಭಾವಿ ವಲಯದ ವಿವಿಧ ಗ್ರಾಮಗಳಿಗೆ ಭೇಟಿ
ಕೆಂಭಾವಿ: ಗ್ರಾಮೀಣ ಭಾಗದಲ್ಲಿ ಯುವ ಶಕ್ತಿ ಸಂಘಟಿಸಿ, ಅವರ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಗೊಂದು ಭಾರತ್ ಜೋಡೋ ಸಂಘ ರಚಿಸಲಾಗುತ್ತಿದೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.
ವಲಯದ ಮಾಲಗತ್ತಿ, ಹೆಗಣ್ಣದೊಡ್ಡಿ, ಗೋಡ್ರಿಹಾಳ, ಕಿರದಳ್ಳಿ ಹಾಗೂ ಕರಡಕಲ್ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿ ವಿವಿಧ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ಮಾತನಾಡಿದ ಅವರು, ೧೬ರಿಂದ ೩೫ ವರ್ಷದೊಳಗಿನ ೧೦೦ ಯುವಕರ ತಂಡ ಈ ಸಂಘದ ಸದಸ್ಯರಾಗಿ ನೋಂದಣಿ ಮಾಡಿಕೊಂಡು ಸಂಘ ರಚಿಸಿದರೆ, ಪ್ರತಿ ಸಂಘಕ್ಕೆ ೧೦ ಲಕ್ಷ ರೂ.ಅನುದಾನ ಲಭಿಸಲಿದೆ. ಈ ಹಣದಿಂದ ಗ್ರಾಮದ ಅಭಿವೃದ್ಧಿಗೆ ಯುವಕರು ಶ್ರಮಿಸಬೇಕು ಎಂದು ಹೇಳಿದರು.
ಪ್ರತಿಯೊಂದು ಸಂಘಕ್ಕೂ ಪ್ರತಿ ವರ್ಷ ನೀಡುವ ಅನುದಾನವನ್ನು ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿ ವಿವಿಧ ಯುವಜನ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆರು ಮಂದಿ ಸದಸ್ಯರ ತಂಡ ನೇಮಕ ಮಾಡಿಕೊಳ್ಳಲಾಗುವುದು. ಭಾರತ್ ಜೋಡೋ ಸಂಘಗಳ ರಚನೆ ಹಾಗೂ ಗ್ಯಾರಂಟಿ ಯೋಜನೆಗಳ ಸದಸ್ಯರ ನೇಮಕಾತಿಗೆ ಗ್ರಾಮಸ್ಥರು ಮತ್ತು ಯುವಕರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹೆಗಣ್ಣದೊಡ್ಡಿ ಗ್ರಾಮಸ್ಥರು ಸೇತುವೆಗಳ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅವಳಿ ಗ್ರಾಮಗಳು ಸೇರಿ ಮತಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿವೃದ್ಧಿಗೆ ತಾವು ಸದಾ ಬದ್ಧರಾಗಿದ್ದು, ಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಶಹಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಯಾಳಗಿ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಮಹದೇವಪ್ಪ ಸಾಲಿಮನಿ, ಬಾಪುಗೌಡ ಪಾಟೀಲ್ ಇತರರಿದ್ದರು.