A barrage of complaints before the Commissioner 
ರಾಜ್ಯ

ಆಯುಕ್ತರ ಮುಂದೆ ದೂರುಗಳ ಸುರಿಮಳೆ

ಕದರೀಪುರ: ಮುಜುರಾಯಿ ಮತ್ತು ಧಾರ್ಮಿಕ ಇಲಾಖೆಗೆ ಸೇರಿದ ಪುರಾಣ ಪ್ರಸಿದ್ಧ ಸೀತಿ ಶ್ರೀ ಭೈರವೇಶ್ವರ, ಶ್ರೀಪಥೇಶ್ವರಸ್ವಾಮಿ ದೇವಾಲಯಕ್ಕೆ ಶುಕ್ರವಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತ ಬಿ.ಶರತ್​ ಭೇಟಿ ನೀಡಿ, ಸ್ಥಳಿಯರಿಂದ ಸಮಸ್ಯೆಗಳನ್ನು ಆಲಿಸಿದರು.
ಕಲ್ಯಾಣ ಮಂಟಪದಿಂದ ಬೆಟ್ಟದ ಮೇಲೆ ದೇವಾಲಯದವರೆಗೂ ಮೆಟ್ಟಿಲುಗಳ ಉದ್ದಕ್ಕೂ ನಿರ್ಮಿಸಿದ್ದ ೋಕಸ್​ ಲೈಟ್​ ತೆರುವುಗೊಳಿಸಿ ದೇವಾಲಯ ಮೇಲ್ಭಾಗದ ಬಂಡೆ ಮೇಲೆ ವಿದ್ಯುತ್​ ದೀಪ ಅಳವಡಿಸಿ ಹೊಸ ಕಾಮಗಾರಿಯಾಗಿ ಬಿಂಬಿಸಿ ಬಿಲ್​ ಮಾಡಿಕೊಳ್ಳಲಾಗಿದೆ.
ದೇಗುಲದ ದಾಸೋಹಕ್ಕಾಗಿ ಭಕ್ತರು ದವಸ, ಧಾನ್ಯ, ತರಕಾರಿ, ಇತರೆ ಆಹಾರ ಪದಾರ್ಥ ನೀಡಿದರೂ ಸಹ ಅಧಿಕಾರಿಗಳು ಪ್ರಸಾದದಂತೆ ಅಲ್ಪಸ್ವಲ್ಪ ಕೊಟ್ಟು ಅನ್ನದಾಸೋಹದ ಹೆಸರಿನಲ್ಲೂ ಲೂಟಿ ಹೊಡೆಯುತ್ತಿದ್ದಾರೆ. ದೇಗುಲ ಬ್ಯಾಂಕ್​ ಖಾತೆಯಲ್ಲಿ ಹಣ ಡ್ರಾ ಮಾಡುತ್ತಾರೆ. ಇದುವರೆಗೂ ದೇವಾಲಯದ ಅಭಿವೃದ್ಧಿ ಕೆಲಸಗಳು ಭಕ್ತರಿಂದಲೇ ನಡೆದಿವೆ. ಇತ್ತೀಚೆಗೆ ಸರ್ಕಾರದಿಂದ ಕೆಲ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಂಡಿವೆ. ಇನ್ನು ದೇವಾಲಯದ ಒಳಗೆ ಮತ್ತು ಸುತ್ತಲೂ ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಕೋತಿಗಳು ಕಿತ್ತುಹಾಕಿವೆ ಎಂದು ಹೇಳಿಕೊಂಡು ಹಣ ಲೂಟಿ ಹೊಡೆಯುವುದೇ ಇಲ್ಲಿನ ಅಧಿಕಾರಿಗಳ ಕೆಲಸವಾಗಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಯುಕ್ತರ ಗಮನಕ್ಕೆ ತಂದರು.
ಅಹವಾಲುಗಳನ್ನು ಆಲಿಸಿದ ಆಯುಕ್ತರು, ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಲಾಗಿದೆ. ನಿಮ್ಮ ದೂರುಗಳು ಮತ್ತು ಸಮಸ್ಯೆಗಳಿದ್ದಲ್ಲಿ ಲಿಖಿತವಾಗಿ ಕೊಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಗಾಪಂ ಮಾಜಿ ಸದಸ್ಯ ಕೆ.ಎಸ್​.ಮುನಿರಾಜ್​, ಸೀತಿ ಹೊಸೂರು ಭೈರಪ್ಪ, ಸೀತಿ ನಾರಾಯಣಪ್ಪ, ಕರ್ನಾಟಕ ದಲಿತ ಅಭಿವೃದ್ಧಿ ಸಮಿತಿ ಉಪಾಧ್ಯ ಮಠಪುರ ಶ್ರೀನಿವಾಸ್​, ಟೇಲರ್​ ನಾಗರಾಜ್​, ಎಂ.ನಾಗೇಶ್​, ಸೀತಿ ಮಣಿ, ಚಂಜಿಮಲೆ ಮುನೇಗೌಡ, ಕದಿರಪ್ಪ ಇದ್ದರು.