ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಸ್ತನ್ಯಪಾನದ ಮಹತ್ವ ಕುರಿತಾದ ಜಾಗೃತಿ ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಪೂಜಾ ಉದ್ಘಾಟಿಸಿದರು. ಡಾ.ಶೋಭಾ, ಡಾ.ಶಶಿಧರ್, ಪಿ.ಪಿ.ಲತಾ, ಡಾ.ಭೂಷಿತಾ ಗೌಡ, ಲಲಿತಾ ಇತರರು ಇದ್ದಾರೆ.
ವಿಶ್ವ ಸ್ತನ್ಯಪಾನ ಸಪ್ತಾಹ-2026ರ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಸ್ತನ್ಯಪಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಪೂಜಾ ಮಾತನಾಡಿ, ತಾಯಿಯ ಹಾಲು ಮಗುವಿಗೆ ಪ್ರಕೃತಿ ದತ್ತವಾದ ಅತ್ಯುತ್ತಮ ಆಹಾರವಾಗಿದ್ದು, ಜನಿಸಿದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸುವುದು ಹಾಗೂ ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡುವುದು ಅತ್ಯಗತ್ಯ ಎಂದು ತಿಳಿಸಿದರು. ಗರ್ಭಿಣಿಯರು ಮತ್ತು ಬಾಣಂತಿಯರು ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ಮಗುವಿಗೆ ಜೀವನದ ಅತ್ಯುತ್ತಮ ಆರಂಭವನ್ನು ತಾಯಿಯ ಹಾಲಿನ ಮೂಲಕವೇ ಮಾಡಬೇಕು ಎಂದುರು.
ಸ್ತ್ರೀರೋಗ ತಜ್ಞೆ ಡಾ.ಶೋಭಾ ಮಾತನಾಡಿ, ತಾಯಿಯ ಹಾಲು ಮಗುವಿನ ಸಮಗ್ರ ಬೆಳವಣಿಗೆಗೆ ಅತ್ಯಗತ್ಯವಾಗಿದ್ದು, ಶಿಶುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ ಎಂದು ತಿಳಿಸಿದರು. ತಾಯಂದಿರು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಪೂರಕ ಆಹಾರದೊಂದಿಗೆ ಸ್ತನ್ಯಪಾನ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ಮಾತನಾಡಿ, ಸ್ತನ್ಯಪಾನವು ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಹೂಡಿಕೆಯಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸ್ತನ್ಯಪಾನವನ್ನು ಉತ್ತೇಜಿಸಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ ಮಾತನಾಡಿ, ವಿಶ್ವ ಸ್ತನ್ಯಪಾನ ಸಪ್ತಾಹದ ಉದ್ದೇಶ, ಈ ವರ್ಷದ ಘೋಷವಾಕ್ಯದ ಮಹತ್ವ, ತಾಯಿಯ ಹಾಲಿನ ಆರೋಗ್ಯಕರ ಪ್ರಯೋಜನಗಳು ಹಾಗೂ ಕುಟುಂಬ ಮತ್ತು ಸಮಾಜವು ಸ್ತನ್ಯಪಾನಕ್ಕೆ ಪೂರಕ ವಾತಾವರಣವನ್ನು ನಿರ್ಮಿಸುವ ಅಗತ್ಯದ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ.ಭೂಷಿತಾ ಗೌಡ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಲಲಿತಾ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ನವೀನ್, ಫೆಲ್ಸಿ , ಪ್ರಕಾಶ್, ಮೀನಾಕ್ಷಿ, ಸಂಗೀತ , ಸುಮತಿ, ಮಹಾದೇವ ಸೇರಿದಂತೆ ಬಾಣಂತಿಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.