ಆನೇಕಲ್ ರಿಯಲ್ ಎಸ್ಟೇಟ್ ಏಜೆಂಟ್ ಗೋಪಿ ಹತ್ಯೆ ಪ್ರಕರಣದ ಎಂಟು ಆರೋಪಿಗಳನ್ನು ಮೆಡಿಕಲ್ ಚೆಕಪ್ಗಾಗಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು.
ಆನೇಕಲ್ : ಆನೇಕಲ್ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ಗೋಪಿ ಹತ್ಯೆ ಪ್ರಕರಣ ಸಂಬಂಧ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹೊನ್ನ ಕಳಸಾಪುರದ ಮೋಹನ್ ಬಾಬು(38), ಆನಂದ(42) ಅತ್ತಿಬೆಲೆ ಹೋಬಳಿ ಹೊಸೂರು ಗ್ರಾಮದ ತೇಜಸ್ (26), ಆನೇಕಲ್ ಬಹದ್ದೂರ್ ಪುರದ ದರ್ಶನ್ (22), ಸರ್ಜಾಪುರ ಹೋಬಳಿಯ ಚಿಂತಲ ಮಡಿವಾಳ ಗ್ರಾಮದ ನಿಖಿಲ್ (22), ಅತ್ತಿಬೆಲೆ ಹೋಬಳಿಯ ಪಟಾಲಮ್ಮ ದೇವಸ್ಥಾನ ಸಮೀಪದ ನಿವಾಸಿ ಪ್ರಶಾಂತ್ (24), ಹುಸ್ಕೂರು ಹಣ್ಣಿನ ಮಾರುಕಟ್ಟೆ, ಗಾಣಿಗರ ಬೀದಿಯ ಕಾನೂನು ಸಂರ್ಷಕ್ಕೆ ಒಳಗಾದ 17 ವರ್ಷದ ಇಬ್ಬರು ಬಂಧಿತರು.
ಇನ್ನೂ ಮೂವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ತಮಿಳುನಾಡಿನ ಹೊಗೇನಕಲ್ ಕಾಡಿನಲ್ಲಿ ಪೊಲೀಸರಿಗೆ ಕಾಣಿಸಿಕೊಂಡಾಗ ಪರಾರಿ ಆಗಲು ಯತ್ನಿಸಿದ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಲು ತೀರ್ಮಾನಿಸಿದ್ದರು. ಆದರೆ, ಆರೋಪಿಗಳನ್ನು ತಮಿಳುನಾಡು ಹಾಗೂ ಕರ್ನಾಟಕ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಗ್ಗೆ ಆರೋಪಿಗಳಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಲಾಗಿದೆ. ನಂತರ ಸಿಐಡಿ, ಎಸ್ಪಿ ಹಾಗೂ ತಂಡ, ಆನೇಕಲ್ ಠಾಣೆಗೆ ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆಯಲಾಗಿದೆ. ಗೋಪಿ ಕೊಲೆ ಮಾಡಲು ಕಳೆದ ಮೂರು ತಿಂಗಳಿಂದ ದುಷ್ಕರ್ಮಿಗಳು ವ್ಯವಸ್ಥಿತ ಸಂಚು ರೂಪಿರುವುದು ಪ್ರಾಥಮಿಕವಾಗಿ ತನಿಖೆಯಲ್ಲಿ ಗೊತ್ತಾಗಿದೆ. ಆನೇಕಲ್ ಪುರಸಭಾ ಸದಸ್ಯ ರವಿ ಕೊಲೆ ಪ್ರಕರಣ ಆರೋಪಿ ಒಬ್ಬ ತಲೆಮರೆಸಿಕೊಂಡಿದ್ದು, ಆತನೂ ಗೋಪಿ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.