ಕಾಗೋಡು ಸತ್ಯಾಗ್ರಹದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಸಮಾಜವಾದಿ ಚಿಂತಕರು ಪಾಲ್ಗೊಂಡಿದ್ದರು.  
ರಾಜ್ಯ

ಕಾಗೋಡು ಚಳುವಳಿಗೆ 75 ವರ್ಷ; ವಿಚಾರ ಸಂಕಿರಣ

ಸಮಾಜವಾದಿ ಚಿಂತಕರ ಅಭಿಪ್ರಾಯ ಮಂಡನೆ

ಬೆಂಗಳೂರು :ಇಡೀ ದೇಶದ ಭೂ ಸುಧಾರಣೆ ಹೋರಾಟಕ್ಕೆ ಹೊಸ ದಿಕ್ಸೂಚಿಯಾದ ಸಾಗರ ತಾಲೂಕಿನ ಕಾಗೋಡು ಚಳುವಳಿಗೆ 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಗಾಂಧಿ ಭವನದಲ್ಲಿ ಮಂಗಳವಾರ ಸಮಾಜವಾದಿ ಚಿಂತಕರ ವಿಚಾರ ಸಂಕಿರಣ ನಡೆಯಿತು. ಸಾಗರದಲ್ಲಿ ಅ.4 ರಂದು ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ.

1951ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡಿನಲ್ಲಿ ನಡೆದ ಹೋರಾಟ 1974ರಲ್ಲಿ ಉಳುವವನೇ ಹೊಲದೊಡೆಯ ಭೂ ಸುಧಾರಣಾ ಕಾಯ್ದೆ ಜಾರಿಯಾಗಲು ಪ್ರೇರಣೆಯಾಯಿತು.

ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಹಿರಿಯ ಚಿಂತಕ ಬಡಗಲಪುರ ನಾಗೇಂದ್ರ ಭೂ ಹೋರಾಟವನ್ನು ಹೊಸ ದೃಷ್ಟಿಯಲ್ಲಿ ನೋಡಬೇಕು. ಸಮಬಾಳು-ಸಮಪಾಲು ಚಿಂತನೆ ಬೆಳೆಸಬೇಕು. ಭೂ ಸ್ವಾಧೀನ ಮಾಡಿ ರೈತರಿಂದ ಕಿತ್ತು ಭಂಡವಾಳಶಾಹಿಗಳಿಗೆ ಕೊಡುವುದು ನಿಲ್ಲಬೇಕು ಎಂದರು.

ಕಾಂಗ್ರೆಸ್ ಮುಖಂಡ ಅರವಿಂದ ದಳವಾಯಿ ಮಾತನಾಡಿ, ರೈತರು, ಗೇಣಿದಾರರು, ಕೂಲಿಕಾರ್ಮಿಕರ ಶೋಷಣೆ ವಿರುದ್ಧ ನಡೆದ ಹೋರಾಟವೇ ಕಾಗೋಡು ಚಳುವಳಿ. ಆ ಶೋಷಣೆಯನ್ನು ವಿರೋಧಿಸಿ ದಿನಕರ ದೇಸಾಯಿ, ಗಣಪತಿಯಪ್ಪರಂತಹ ನಾಯಕರು ಹೋರಾಟ ಕಟ್ಟಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದು ನೆನಪಿಸಿಕೊಂಡರು.

ವಿಚಾರ ಸಂಕಿರಣದಲ್ಲಿ ಮಾಜಿ ಸಂಸದ ಡಾ.ವೆಂಕಟೇಶ್, ಸಮಾಜವಾದಿ ಚಿಂತಕರಾದ ಗೋಪಾಲಕೃಷ್ಣ, ಪ್ರೊ.ಹನುಮಂತ,ನಾಗೇಶ್ ಅರಳಕುಪ್ಪೆ, ಅಪ್ಪಾಸಾಹೇಬ್ ಯರನಾಳ, ಪ್ರೊ ವೆಂಕಟೇಶ್. ಸಿಜಿಕೆ ರೆಡ್ಡಿ ಮತ್ತಿತರರಿದ್ದರು.

ಡಾ.ಲೋಹಿಯಾ ಅವರು ಭೂ ಸುಧಾರಣೆಗಾಗಿ ಹೋರಾಡಿದ ಮಹಾನ್ ಚಿಂತಕರು, ಕಾಗೋಡು ಚಳುವಳಿಯಲ್ಲಿ ಭಾಗವಹಿಸಿದ್ದ ಅವರ ಚಿಂತನೆ ದೇಶದಾದ್ಯಂತ ಹರಡಿದೆ. ಕಾಗೋಡು ಚಳುವಳಿಯ 75ನೇ ವರ್ಷಾಚರಣೆಯನ್ನು ಜಾರ್ಖಂಡ್‌ನಲ್ಲಿ ದೊಡ್ಡದಾಗಿ ಮಾಡಲಾಗುತ್ತದೆ. ಸಮಾಜವಾದಿ ಚಿಂತನೆಯನ್ನು ಹೊಸ ಪೀಳಿಗೆಗೆ ತಲುಪಿಸುವ ಅಗತ್ಯವಿದೆ.
ಅಭಿಷೇಕ್ ರಂಜನ್, ಸಮಾಜವಾದಿ ರಾಷ್ಟ್ರೀಯ ಮುಖಂಡ