ಮಾಣಿಕನಗರದ ಗುರುಗಂಗಾ ಹಳ್ಳದ ಮಾಲಿನ್ಯ ತಡೆಗೆ ಒತ್ತಾಯಿಸಿ ಹುಮನಾಬಾದ್​ ತಹಸೀಲ್ದಾರ್​ ಜಗದೀಶ ಚೌರ ಅವರಿಗೆ ಶ್ರೀ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ಮನವಿಪತ್ರ ಸಲ್ಲಿಸಿದರು. ಶ್ರೀ ಚೇತನರಾಜ ಪ್ರಭು, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​, ಎಂಎಲ್​ಸಿ ಭೀಮರಾವ ಪಾಟೀಲ್​ ಇತರರಿದ್ದರು. 
ರಾಜ್ಯ

ಗುರುಗಂಗಾ ಹಳ್ಳ ಮಾಲಿನ್ಯ ತಡೆಗೆ 72 ಗಂಟೆ ಗಡುವು

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮಾಣಿಕಪ್ರಭು ಸಂಸ್ಥಾನದಿಂದ ತಹಸೀಲ್ದಾರ್​ಗೆ ಮನವಿ
  • ಹುಮನಾಬಾದ್​ನಲ್ಲಿ ಬೃಹತ್​ ಪ್ರತಿಭಟನೆ
ಹುಮನಾಬಾದ್​: ಮಾಣಿಕನಗರದ ಪವಿತ್ರ ಗುರುಗಂಗಾ ಹಳ್ಳಕ್ಕೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ಹರಿಯುತ್ತಿರುವ ರಾಸಾಯನಿಕಯುಕ್ತ ತ್ಯಾಜ್ಯವನ್ನು ಶಾಶ್ವತವಾಗಿ ತಡೆಗಟ್ಟುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಶ್ರೀ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಪ್ರಭು ನೇತೃತ್ವದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಬೃಹತ್​ ಪ್ರತಿಭಟನೆ ನಡೆಸಿದರು.
ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದಿಂದ ತಹಸಿಲ್​ ಕಚೇರಿವರೆಗೆ ಶ್ರೀ ಆನಂದರಾಜ ಪ್ರಭು, ಶ್ರೀ ಚೇತನರಾಜ ಪ್ರಭು ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​, ವಿಧಾನ ಪರಿಷತ್​ ಸದಸ್ಯ ಭೀಮರಾವ ಪಾಟೀಲ್​ ಸೇರಿ ಅಸಂಖ್ಯ ಜನರು ಪಾಲ್ಗೊಂಡಿದ್ದರು.
ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್​ ಜಗದೀಶ ಚೌರ ಅವರಿಗೆ ಸಲ್ಲಿಸಿದ ಶ್ರೀ ಆನಂದರಾಜ ಪ್ರಭು, ಸುಮಾರು ಒಂದು ದಶಕದಿಂದ ಕೈಗಾರಿಕಾ ಮಾಲಿನ್ಯ ಸಮಸ್ಯೆ ಮುಂದುವರಿದಿದೆ. ಗುರುಗಂಗಾ ಹಳ್ಳ ಧಾರ್ಮಿಕ ನಂಬಿಕೆ, ಸಂಸತಿ ಮತ್ತು ಜನಜೀವನ ಜತೆ ಅವಿನಾಭಾವ ಸಂಬಂಧ ಹೊಂದಿದ ಪವಿತ್ರ ಜಲಮೂಲ. ಆದರೆ ಕೆಲ ಕೈಗಾರಿಕೆಗಳು ಸಂಸ್ಕರಣೆ ಮಾಡದ ವಿಷಕಾರಿ ತ್ಯಾಜ್ಯವನ್ನು ಹಳ್ಳಕ್ಕೆ ಹರಿಸುತ್ತಿರುವುದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ದುರ್ವಾಸನೆ, ತೈಲಯುಕ್ತ ಪದರ ಹಾಗೂ ಜನ&ಜಾನುವಾರುಗಳ ಆರೋಗ್ಯಕ್ಕೂ ಅಪಾಯ ಎದುರಾಗುವ ಆತಂಕಕಾರಿ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ದೂರಿದರು.
ಮಾಣಿಕನಗರ, ಹುಮನಾಬಾದ್​, ಗಡವಂತಿ, ಮೊಳಕೇರಾ, ಧುಮ್ಮನಸೂರ ಮತ್ತು ಹುಡಗಿ ಸೇರಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಬಳಸುವ ಕುಡಿಯುವ ನೀರಿನ ಮೂಲಕ್ಕೂ ಅಪಾಯ ಎದುರಾಗಿದೆ. ಸಂಬಂಧಿತ ಇಲಾಖೆಗಳ ಮೂಲಕ ಸಮಗ್ರ ತನಿಖೆ ನಡೆಸಿ ಮಾಲಿನ್ಯದ ಮೂಲ ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಪರಿಸರ ಕಾನೂನಿನಡಿ ಕಠಿಣ ಕ್ರಮ ಜರುಗಿಸಬೇಕು. ಕೈಗಾರಿಕಾ ತ್ಯಾಜ್ಯ ಗುರುಗಂಗಾ ಸೇರುವುದನ್ನು ಶಾಶ್ವತವಾಗಿ ತಡೆಯಲು 72 ಗಂಟೆಯೊಳಗೆ ಕ್ರಮ ಕೈಗೊಳ್ಳದಿದ್ದರೆ ಮಾಣಿಕನಗರಕ್ಕೆ ಸೀಮಿತವಾಗದೆ ಮಾಲಿನ್ಯದಿಂದ ಬಾಧಿತ ಎಲ್ಲ ಗ್ರಾಮಸ್ಥರೊಂದಿಗೆ ಬೃಹತ್​ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಅರವಿಂದ ಭಾಲ್ಕಿಕರ್​, ನರೇಂದ್ರ ಮಿಶ್ರಾ, ಬಾಬುರಾವ ತುಂಬಾ, ಮಾಣಿಕರಾವ ವಾಡೇಕರ್​, ಗಜೇಂದ್ರ ಕನಕಟ್ಟಕರ್​, ಓಂಕಾರ ತುಂಬಾ, ಭಜರಂಗ, ಗಿರೀಶ ತುಂಬಾ, ಲಕ್ಷ$್ಮಣ ಸಿಂಗೆ, ಗಿರೀಶ ಕುಲಕರ್ಣಿ ಇತರರಿದ್ದರು.

ವಿಷಪೂರಿತ ತ್ಯಾಜ್ಯ ಹರಿಬಿಡುವ ಕಾರ್ಖಾನೆ ಬಂದ್​ ಮಾಡಿ

ಪ್ರತಿಭಟನೆ ಮುಗಿದ ಬಳಿಕ ಕೈಗಾರಿಕಾ ಪ್ರದೇಶಕ್ಕೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಹಾಗೂ ವಿಧಾನ ಪರಿಷತ್​ ಸದಸ್ಯ ಭೀಮರಾವ ಪಾಟೀಲ್​ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಸರ ಮಾಲಿನ್ಯ ಕುರಿತು ಪರಿಶೀಲಿಸಿದರು. ಕೆಲ ರಾಸಾಯನಿಕ ಕಾರ್ಖಾನೆಗಳಿಂದ ದುರ್ವಾಸನೆ ಹಾಗೂ ವಿಷಪೂರಿತ ತ್ಯಾಜ್ಯ ಹೊರಹಾಕುತ್ತಿರುವ ಬಗ್ಗೆ ನಿರಂತರ ದೂರು ಬರುತ್ತಿದ್ದು, ತಕ್ಷಣ ನಿಲ್ಲಿಸಬೇಕು. ಯಾವ ಕಾರ್ಖಾನೆಯಿಂದ ವಿಷಪೂರಿತ ತ್ಯಾಜ್ಯ ಹರಿಸಲಾಗುತ್ತಿದೆ ಎಂಬುದನ್ನು ತಕ್ಷಣ ಪತ್ತೆ ಹಚ್ಚಿ ಬಂದ್​ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ನಿರ್ದೇಶನ ನೀಡಿದರು. ತಹಸೀಲ್ದಾರ್​ ಜಗದೀಶ್​ ಚೌರ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಆಮದ್​ ಪಟೇಲ್​, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಶಿವಲೀಲಾ, ಪಿಡಿಒ ಜಗದೇವಿ ಇತರರಿದ್ದರು.