ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶ (ಐಆರ್‌ಎ) ವ್ಯಾಪ್ತಿಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ (ಎನ್ಎಫ್ಎಸ್ಎ) ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಪಡಿತರವನ್ನು ಒಂದೇ ಬಾರಿಗೆ ಪ್ರಸಕ್ತ ತಿಂಗಳಲ್ಲಿ ಕಾರ್ಡ್‌ದಾರರಿಗೆ ವಿತರಣೆಯಾಗಲಿದೆ.
ಅಂತ್ಯೋದಯ ಕಾರ್ಡ್‌ನ ಪ್ರತಿ ಕುಟುಂಬಕ್ಕೆ 42 ಕೆಜಿ ರಾಗಿ, 28 ಕೆಜಿ ಅಕ್ಕಿ ಸೇರಿ 70 ಕೆಜಿ ಹಾಗೂ ಬಿಪಿಎಲ್ ಹೊಂದಿರುವ ಪ್ರತಿ ಸದಸ್ಯನಿಗೆ 6 ಕೆಜಿ ರಾಗಿ,4 ಕೆಜಿ ಅಕ್ಕಿ ಸೇರಿ 10 ಕೆಜಿ ಆಹಾರ ಧಾನ್ಯಗಳು ಸಿಗಲಿವೆ.
ಎರಡು ತಿಂಗಳಿನ ಪಡಿತರ ಪಡೆಯಲು ಕಾರ್ಡ್‌ದಾರರು, ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತ್ಯೇಕವಾಗಿ ಎರಡು ಬಾರಿ ಆಧಾರ್ ಬಯೋಮೆಟ್ರಿಕ್ ಧೃಢೀಕರಣ ನೀಡುವುದು ಕಡ್ಡಾಯ. ಐಆರ್‌ಎ ವ್ಯಾಪ್ತಿಯಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ತೊಂದರೆ, ನಿಗದಿತ ಪ್ರಮಾಣಕ್ಕಿಂತ ಕಡಿಮೆ ನೀಡುವುದು, ಹೆಚ್ಚುವರಿ ಹಣ ವಸೂಲಿ ಮಾಡುವುದು ಅಥವಾ ಇತರೆ ಅಕ್ರಮಗಳು ಕಂಡುಬಂದಲ್ಲಿ ಸಾರ್ವಜನಿಕರು ಆಹಾರ ಇಲಾಖೆಯ ಕಚೇರಿಗೆ ಅಥವಾ ಸಹಾಯವಾಣಿ ಸಂಖ್ಯೆ 1967ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು. ಚೀಟಿದಾರರು ಇಲಾಖೆಯೊಂದಿಗೆ ಸಹಕರಿಸಿ ತಮ್ಮ ಹಕ್ಕಿನ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದುಕೊಳ್ಳಬೇಕೆಂದು ಇಲಾಖೆಯ ಅಪರ ನಿರ್ದೇಶಕ ವಿ.ಪಾತರಾಜು ಹೇಳಿದ್ದಾರೆ.