ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನ ಕೂಲಿ ಕಾರ್ಮಿಕರು ದುರ್ಮರಣ
- ತೆಲಂಗಾಣದ ಜಹೀರಾಬಾದ್ ಬಳಿಯ ಹೆದ್ದಾರಿಯಲ್ಲಿ ಘಟನೆ
- ಭೀಕರ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ದುರ್ಮರಣ
ಬೀದರ್: ನೆರೆಯ ತೆಲಂಗಾಣದ ಜಹೀರಾಬಾದ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ (ಆ.11) ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಏಳು ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಬೀದರ್ ತಾಲೂಕಿನ ರಾಜಗೀರಾ ಗ್ರಾಮದ ಏಳು ಕಾರ್ಮಿಕರು ದುರಂತ ಅಂತ್ಯ ಕಂಡಿದ್ದು, ಚಾಲಕ ದೇವದಾಸ ಮಾರುತಿ, ರೇಖಾ ಸಂಜು, ರೇಷ್ಮಾ, ನಿಕಿತಾ, ಶ್ರೀದೇವಿ, ಕವಿತಾ ಗುಂಡಪ್ಪ, ತುಳಮ್ಮ ಮೃತ ದುರ್ದೈವಿಗಳು ಎನ್ನಲಾಗಿದೆ. ರಾಜಗೀರಾ ಗ್ರಾಮದ ಇನ್ನೂ ಐವರು ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಜಹೀರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜಗೀರಾ ಗ್ರಾಮದಿಂದ ಈ ಜನ ನಿತ್ಯವೂ ಕೂಲಿ ಕೆಲಸಕ್ಕಾಗಿ ನೆರೆಯ ಜಹೀರಾಬಾದ್‌ಕ್ಕೆ ಹೋಗುತ್ತಿದ್ದರು. ಎಂದಿನಂತೆ ಕೆಲಸ ಮುಗಿಸಿ ಆಟೋದಲ್ಲಿ ಸ್ವಗ್ರಾಮದ ಕಡೆಗೆ ಬರುವ ವೇಳೆ ಎದುರಿನಿಂದ ಬಂದ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಘಟನೆ ಹೈದರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ.
ನೆರೆಯ ತೆಲಂಗಾಣದ ಜಹೀರಾಬಾದ್ ಬಳಿ ಸಂಭವಿಸಿದ ರಸ್ತೆ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ರಾಜಗೀರಾ ಗ್ರಾಮದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ತೆಲಂಗಾಣಕ್ಕೆ ಹೋಗಿದ್ದವರು, ಮರಳಿ ಸ್ವಗ್ರಾಮಕ್ಕೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂಬ ಮಾಹಿತಿ ಇದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಹಾಗೂ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲು ತೆಲಂಗಾಣದ ಆಡಳಿತದೊಂದಿಗೆ ಸತತ ಸಂಪರ್ಕದಲ್ಲಿರುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.