60 sacks of ration rice seized
ಮುಳಬಾಗಿಲು: ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟಕ್ಕೆ ಮುಂದಾಗುತ್ತಿರುವ ಮಾಹಿತಿ ಮೇರೆಗೆ ಮಂಗಳವಾರ ಮುಳಬಾಗಿಲು ನಗರ ಪೊಲೀಸರು ದಾಳಿ ಮಾಡಿ ಮಿನಿ ಗೂಡ್ಸ್ ಟೆಂಪೋ ಜತೆಗೆ 30ಕೆಜಿಯ 60 ಮೂಟೆ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಖಲೀಫ ಮೊಹಲ್ಲದ ನ್ಯಾಯಬೆಲೆ ಅಂಗಡಿಯಿಂದ ವಿತರಣೆ ಮಾಡಿರುವ ಅಕ್ಕಿ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪರಿಶೀಲನೆ ಮಾಡಬೇಕಿದೆ. ಮುಳಬಾಗಿಲು ನಗರ ಪೊಲೀಸರು ಅಕ್ಕಿ ವಶಕ್ಕೆ ಪಡೆದುಕೊಂಡು ತನಿಖೆ ಮಾಡುತ್ತಿದ್ದಾರೆ.
— ಮಹ್ಮದ್ ಅಲಿ ಫುಡ್ ಇನ್ಸ್ಪೆಕ್ಟರ್, ಮುಳಬಾಗಿಲು
ಎಂ.ಎನ್.ಹಳ್ಳಿ ರಸ್ತೆಯ ಎಸ್ಎಲ್ವಿ ಸ್ಟೋರ್ ಬಳಿ ಟೆಂಪೋಗೆ ಅಕ್ಕಿ ಮೂಟೆಗಳನ್ನು ತುಂಬಿಕೊಂಡು ಕೋಲಾರ ಕಡೆಗೆ ಹೋಗುವಾಗ ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಇನ್ಸ್ಪೆಕ್ಟರ್ ಎ.ಸುಧಾಕರರೆಡ್ಡಿ ಮತ್ತು ಸಿಬ್ಬಂದಿ ದಾಳಿ ಮಾಡಿ ಇಬ್ಬರನ್ನು ಅಕ್ಕಿ ಮತ್ತು ವಾಹನ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಗರದ ಖಲೀಫ ಮೊಹಲದ ಒಂದೇ ಕುಟುಂಬದ 25 ಜನರಿಗೆ ಸೇರಿದ ಪಡಿತರ ಅಕ್ಕಿ ಇದಾಗಿದ್ದು, ಪಡಿತರ ಅಕ್ಕಿಮಾರಾಟ ಮಾಡಿ ಒಳ್ಳೆಯ ಅಕ್ಕಿ ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.