- * ಇಲಾಖೆ ನಿರ್ಧಾರಕ್ಕೆ ಪ್ರಕಾಶಕರ ಸಂಘದಿಂದ ಅಸಮಾಧಾನ
ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರದ ಐದು ವಲಯಗಳು ಖರೀದಿಸುತ್ತಿದ್ದ ವಿವಿಧ ಪುಸ್ತಕಗಳ ತಲಾ 100 ಪ್ರತಿಗಳಲ್ಲಿ 60 ಕಡಿತಗೊಳಿಸಿರುವುದಕ್ಕೆ ಕರ್ನಾಟಕ ಪ್ರಕಾಶಕರ ಸಂಘವು ಅಸಮಾಧಾನ ವ್ಯಕ್ತಪಡಿಸಿದೆ.
ಆಯ್ಕೆಯಾದ ಪುಸ್ತಕಗಳ ಪ್ರತಿ ಶೀರ್ಷಿಕೆಯ ನೂರು ಪ್ರತಿಗಳನ್ನು ಈ ಹಿಂದಿನಂತೆ ಖರೀದಿಸುವಂತೆ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮತ್ತು ಪ್ರಧಾನ ಕಾರ್ಯದರ್ಶಿ ಅಭಿನವ ರವಿಕುಮಾರ್ ಅವರು ಇಲಾಖೆ ಆಯುಕ್ತೆ ವಿದ್ಯಾ ಕುಮಾರಿ ಅವರಿಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ ಹಾಗೂ ಕೇಂದ್ರ ವಲಯಗಳು ಪ್ರತಿ ವರ್ಷ ಬಜೆಟ್ ಅನುಮೋದನೆ ಪಡೆದು, ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ತಲಾ 100 ಪ್ರತಿಗಳನ್ನು ಲೇಖಕರು ಮತ್ತು ಪ್ರಕಾಶಕರಿಂದ ನೇರವಾಗಿ ಖರೀದಿಸುತ್ತಿದ್ದವು. ಈಗ ಯಾವ ಮುನ್ಸೂಚನೆಯನ್ನೂ ನೀಡದೆ ಖರೀದಿಯಲ್ಲಿ ಶೇ. 60 ಕಡಿತ ಮಾಡಿ ಆದೇಶ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.