ವಿಧಾನಸೌಧ 
ರಾಜ್ಯ

ಹಿಂದುಳಿದವರು, ಎಸ್ಸಿ-ಎಸ್ಟಿಗೆ ಶೇ.60 ಸಚಿವ ಸ್ಥಾನ

ಬೆಂಗಳೂರು: ಸಂಪುಟ ರಚನೆ ವೇಳೆ ಪ್ರಮುಖವಾಗಿ ಚರ್ಚೆಗೀಡಾಗುವ ವಿಚಾರ ಜಾತಿ ಪ್ರಾತಿನಿಧ್ಯ. ಆಡಳಿತ ಪಕ್ಷ ಯಾವ ಸಮುದಾಯಕ್ಕೆ ಎಷ್ಟು ಪ್ರಮಾಣದಲ್ಲಿ ಅವಕಾಶ ನೀಡಿದೆ ಎಂಬ ಅವಲೋಕನ ಸಾರ್ವಜನಿಕ ವಲಯದಲ್ಲಿ ನಡೆಯುತ್ತದೆ. ಇನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಎಂದಿನಂತೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಪ್ರಾಧಾನ್ಯತೆ ಸಿಕ್ಕಿದ್ದು. ಹಿಂದುಳಿದವರು, ಅಲ್ಪ ಸಂಖ್ಯಾತರು ಹಾಗೂ ಎಸ್ಸಿ, ಎಸ್ಟಿ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಒಟ್ಟಾರೆ 38 ಪ್ರಮುಖ ಸ್ಥಾನಗಳಲ್ಲಿ 23 ಸ್ಥಾನಗಳು, ಅಂದರೆ ಶೇ. 60 ಹೆಚ್ಚು, ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಪ್ರತಿನಿಧಿಗಳಿಗೆ ದೊರೆತಿವೆ.
ಏಳು ಲಿಂಗಾಯತರಿಗೆ ಸ್ಥಾನ ನೀಡಲಾಗಿದೆ. ಜತೆಗೆ ರೆಡ್ಡಿ ಸಮುದಾಯದ ಜಿ.ಎಸ್.ಪಾಟೀಲ್ ಅವರಿಗೆ ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಐವರು ಒಕ್ಕಲಿಗರಿಗೆ ಸಚಿವ ಸ್ಥಾನ ಲಭಿಸಿದ್ದು, ಮುಖ್ಯಮಂತ್ರಿಯೂ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಹೀಗಾಗಿ ಹೆಚ್ಚಿನ ಅರ್ಹ ಆಕಾಂಕ್ಷಿಗಳು ಅವಕಾಶ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಪರಿಶಿಷ್ಟ ಜಾತಿಗಳಿಂದ ಏಳು ಮಂದಿ ಸಚಿವರಾಗಿರುವುದು ಬಲು ಅಪರೂಪ. ಇದರಲ್ಲಿ 3 ಬಲಗೈ, 2 ಎಡಗೈ, ಓರ್ವ ಲಂಬಾಣಿ ಮತ್ತು ಓರ್ವ ಭೋವಿ ಸಮುದಾಯವನ್ನು ಪ್ರತಿನಿಧಿಸುವ ಸಚಿವರು ಇದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೂರು ಸ್ಥಾನ ಮೀಸಲಿಡಲಾಗಿದೆ.
ಮುಸ್ಲಿಂ ಸಮುದಾಯಕ್ಕೆ 4 ಪ್ರಮುಖ ಸ್ಥಾನಗಳಲ್ಲಿ ಪ್ರಾತಿನಿಧ್ಯ ದೊರೆತಿದ್ದು, 3 ಸಚಿವರು ಹಾಗೂ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನವನ್ನು ನೀಡಲಾಗಿದೆ. ಇದು ಬಲು ಅಪರೂಪ. ಹಿಂದುಳಿದ ವರ್ಗಗಳಿಗೆ 7 ಸಚಿವ ಸ್ಥಾನಗಳನ್ನು ನೀಡಲಾಗಿದ್ದು, ಇದರೊಂದಿಗೆ ಉಭಯ ಸದನಗಳ ಉಪಸಭಾಧ್ಯಕ್ಷ ಸ್ಥಾನಗಳಲ್ಲಿಯೂ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ.

ಸಂಪುಟದ ಜಾತಿವಾರು ಲೆಕ್ಕಾಚಾರ

ಒಕ್ಕಲಿಗರು (ಸಿಎಂ ಸೇರಿ) 6
ಲಿಂಗಾಯತ -6
ಕುರುಬ -2
ವಾಲ್ಮೀಕಿ-3
ಮುಸ್ಲಿಂ-3
ಕ್ರೈಸ್ತ -1
ಪರಿಶಿಷ್ಟ ಜಾತಿ-7
ಉಪ್ಪಾರ-1
ಮರಾಠ-1
ಈಡಿಗ -1
ರಜಪೂತ -1
ರೆಡ್ಡಿ-1

ಜಿಲ್ಲಾವಾರು ಪ್ರಾತಿನಿಧ್ಯಕ್ಕಿಲ್ಲ ಆದ್ಯತೆ

ಬೆಂಗಳೂರು ನಗರ ಜಿಲ್ಲೆಯಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿ 7 ಶಾಸಕರಿಗೆ ಸಚಿವ ಸ್ಥಾನ ಲಭಿಸಿದೆ. ಬೆಳಗಾವಿ, ಕೊಪ್ಪಳ, ಬೆಂಗಳೂರು ದಕ್ಷಿಣ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಇಬ್ಬರಿಗೆ ಹಾಗೂ ಬೀದರ್, ಧಾರವಾಡ, ವಿಜಯಪುರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ಹಾಸನ, ದಕ್ಷಿಣ ಕನ್ನಡ, ತುಮಕೂರು ಜಿಲ್ಲೆಗಳಿಗೆ ತಲಾ 1 ಸಚಿವ ಸ್ಥಾನ ಹಾಗೂ ಕೊಡಗು ಜಿಲ್ಲೆಯ ಎ.ಎಸ್. ಪೊನ್ನಣ್ಣಗೆ ಉಪ ಸಭಾಧ್ಯಕ್ಷ ಸ್ಥಾನ ಲಭಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಮೂರು ಸಚಿವ ಸ್ಥಾನ ಸಿಕ್ಕಿದೆ. ಉಡುಪಿ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಗದಗ, ಯಾದಗಿರಿ, ಉತ್ತರ ಕನ್ನಡ, ವಿಜಯನಗರ, ರಾಯಚೂರು ಸೇರಿದಂತೆ 9 ಜಿಲ್ಲೆಗಳಿಗೆ ಸಚಿವ ಸ್ಥಾನ ಲಭಿಸಿಲ್ಲ.

ಬ್ರಾಹ್ಮಣರಿಗಿಲ್ಲ ಸಚಿವ ಸ್ಥಾನ

ಈ ಸರ್ಕಾರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ಕೊಟ್ಟಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ದಿನೇಶ್ ಗುಂಡೂರಾವ್ ಸಚಿವರಾಗಿದ್ದರು. ಆದರೆ, ಈಗ ಆರ್.ವಿ. ದೇಶಪಾಂಡೆ, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್‌ನಲ್ಲಿ ಬ್ರಾಹ್ಮಣ ಸಮುದಾಯದಿಂದ ಮೂವರ ಶಾಸಕರು ಇದ್ದಾರೆ. ಕಳೆದ ಎರಡು ದಶಕದಲ್ಲಿ ಮೊದಲ ಬಾರಿಗೆ ಈ ಸಮುದಾಯಕ್ಕೆ ಅವಕಾಶ ನೀಡಿಲ್ಲ.

ಅವಕಾಶ ವಂಚಿತ ಪ್ರಬಲ ಆಕಾಂಕ್ಷಿಗಳು

ಶಾಸಕರಾದ ಕೆ. ಅಶೋಕ್ ಪಟ್ಟಣ್, ಆರ್.ವಿ. ತಿಮ್ಮಾಪುರ್, ಬಿ.ಆರ್. ಪಾಟೀಲ್, ಎನ್.ಎಸ್. ಬೋಸರಾಜು, ಎಚ್.ಕೆ. ಪಾಟೀಲ್, ಪ್ರಸಾದ್ ಅಬ್ಬಯ್ಯ, ಅನ್ನಪೂರ್ಣ, ಎನ್.ವೈ. ಗೋಪಾಲಕೃಷ್ಣ, ಬಿ.ಜಿ. ಗೋವಿಂದಪ್ಪ, ಸಂಗಮೇಶ್, ಬೇಳೂರು ಗೋಪಾಲಕೃಷ್ಣ, ಸುಬ್ಬಾರೆಡ್ಡಿ, ಎಂ.ಸಿ. ಸುಧಾಕರ್, ಎಂ. ಕೃಷ್ಣಪ್ಪ, ಎನ್.ಎ.ಹ್ಯಾರಿಸ್, ಬಿ. ಶಿವಣ್ಣ, ಶರತ್ ಬಚ್ಚೇಗೌಡ ಇವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳು ಆಗಿದ್ದರು.