ಹಾವೇರಿ: ದೆಹಲಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಗೈರುಹಾಜರಾದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನಕುಮಾರ ಲಮಾಣಿ ಸೇರಿದಂತೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ (ಕೆಪಿವೈಸಿಸಿ) ಆರು ಪದಾಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಈ ಕುರಿತು ಭಾರತೀಯ ಯುವ ಕಾಂಗ್ರೆಸ್ನ ರಾಷ್ಟ್ರೀಯ ನಾಯಕತ್ವ ಶುಕ್ರವಾರ ಅಮಾನತು ಆದೇಶ ಹೊರಡಿಸಿದೆ. ದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಎಸ್ಐಆರ್ ವಿರೋಧಿಸಿ ಹೋರಾಟ, ಸಂಸತ್ ಚಲೋ ಸೇರಿ ವಿವಿಧ ಕಾರ್ಯಕ್ರಮಗಳಿಗೆ ಗೈರುಹಾಜರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ನಾಯಕರು, ಮುಂದಿನ ಆದೇಶದವರೆಗೆ ಆರು ಪದಾಧಿಕಾರಿಗಳನ್ನು ಅಮಾನತಿನಲ್ಲಿಡಲು ನಿರ್ಧರಿಸಿದ್ದಾರೆ.
ಅಮಾನತುಗೊಂಡವರಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ಅಜೀಜ್, ಸೂರಜ್ ಆವಟಿ, ಪವನ ಸಾಲಿಯಾನ್, ಅಭಿಷೇಕ ಸಿ. ಹಾಗೂ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನಕುಮಾರ ಲಮಾಣಿ ಮತ್ತು ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಸಿರ್ಸಿಕರ ಸೇರಿದ್ದಾರೆ. ಕೆಪಿವೈಸಿಸಿ ಅಧ್ಯಕ್ಷ ಮಂಜುನಾಥ ಎಚ್.ಎಸ್, ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕೆಪಿವೈಸಿಸಿ ಸಹ ಉಸ್ತುವಾರಿ ತಾರಿಕ್ ಬಾಗ್ವಾನ್ ಮತ್ತು ಶ್ರೀನಿವಾಸ ರಾಠೋಡ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.