ಬೆಂಗಳೂರು:ಸಾಕಷ್ಟು ವಿವಾದ ನಡುವೆಯೂ ಅಬಕಾರಿ ಇಲಾಖೆ, ಖಾಲಿ ಅಥವಾ ಲಭ್ಯವಿರುವ ಮದ್ಯದಂಗಡಿಗಳ ಸನ್ನದುಗಳನ್ನು ಇ-ಹರಾಜು ಹಾಕಲು ಕೊನೆಗೂ ಅಧಿಸೂಚನೆ ಹೊರಡಿಸಿದೆ.
ಡಿ.22ರಂದು ಬಿಡ್‌ದಾರರ ನೋಂದಣಿ ಪ್ರಾರಂಭವಾಗಲಿದೆ. ಡಿ.23ರಿಂದ ಜ.7ರವರೆಗೆ ಸಂಭಾವ್ಯ ಬಿಡ್‌ದಾರರಿಗೆ ಹಾಗೂ ಜಿಲ್ಲಾ ಇ-ಹರಾಜು ನೋಡಲ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಜ.13ರಿಂದ ಜ.20ರವರೆಗೆ ನೇರ ಹರಾಜು ಪ್ರಕ್ರಿಯೆ ಶುರುವಾಗಲಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ವ್ಯಾಲೆಟ್‌ಗೆ ಹಣ ಪಾವತಿ ಖಚಿತವಾದ ನಂತರ ಬಿಡ್ಡರ್‌ಗಳು ಆನ್‌ಲೈನ್‌ನಲ್ಲಿ ಭಾಗಿಯಾಗಲು ಅರ್ಹತೆ ಪಡೆಯುತ್ತಾರೆ. ಯಶಸ್ವಿ ಬಿಡ್‌ದಾರರಿಗೆ ಮುಂದಿನ 5 ವರ್ಷದ ಅವಧಿವರೆಗೆ ಲೈಸೆನ್ಸ್ ಮಂಜೂರಾತಿ ಮಾಡಲಾಗುತ್ತದೆ. ಇದರಿಂದಾಗಿ 700 ಕೋಟಿ ರೂ.ಗಿಂತ ಅಧಿಕ ಅದಾಯ ಬರಬಹುದು ಎಂದು ಇಲಾಖೆ ಹೇಳಿಕೊಂಡಿದೆ.
1987ರಲ್ಲಿ ನಿಗದಿಯಾಗಿದ್ದ ವೈನ್‌ಶಾಪ್(ಸಿಎಲ್2) ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್-9) ಕೋಟಾದಡಿ ಬಾಕಿ ಉಳಿದ, ಸ್ಥಗಿತಗೊಂಡ, ಮುಟ್ಟುಗೋಲು ಹಾಕಿಕೊಂಡ, ನವೀಕರಿಸದ, ಪ್ರಾರಂಭವಾಗದ, ಹಿಂಪಡೆದ, ರದ್ದುಗೊಳಿಸಿದ ಸನ್ನದುನ್ನು ‘ಸಿಎಲ್-2ಎ’ ಹಾಗೂ ‘ಸಿಎಲ್-9ಎ’ ಎಂದು ವರ್ಗೀಕರಿಸಿ ಈಗಾಗಲೇ ಹರಾಜು ಪಟ್ಟಿಗೆ ಸೇರಿಸಲಾಗಿದೆ.ಇವುಗಳನ್ನು ಕಾಲ ಕಾಲಕ್ಕೆ ನಿಗದಿಪಡಿಸಿರುವ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕ ಪಾವತಿ ಯಶಸ್ವಿ ಬಿಡ್‌ದಾರರಿಗೆ ಮಾರಾಟ ಮಾಡಲಾಗುತ್ತದೆ.
ಬೆಂಗಳೂರಲ್ಲೇ ಅಧಿಕ ಲೈಸೆನ್ಸ್:
ರಾಜ್ಯಾದ್ಯಂತ 569 ಲೈಸೆನ್ಸ್‌ಗಳನ್ನು ಎಲೆಕ್ಟ್ರಾನಿಕ್ ಮೂಲಕ ಹರಾಜು ಹಾಕಲಾಗುತ್ತದೆ. ರಾಜ್ಯದ ಇತರ ಜಿಲ್ಲೆಗಳಗಿಂತ ಬೆಂಗಳೂರಲ್ಲೇ ಅತಿ ಹೆಚ್ಚು 182 ಬಾರ್‌ಗಳನ್ನು ಹರಾಜು ಹಾಕಲಾಗುತ್ತಿದೆ.
ದಕ್ಷಿಣ ಕನ್ನಡ 30, ತುಮಕೂರು 24, ಧಾರವಾಡ 19, ಮಂಡ್ಯ 15, ಕೋಲಾರ 15, ಕಲಬುರಗಿ 15, ಶಿವಮೊಗ್ಗ 15, ಮೈಸೂರು ಗ್ರಾಮಾಂತರ 14, ಹಾವೇರಿ 14, ಉತ್ತರ ಕನ್ನಡ 14, ಹಾಸನ 13, ಮೈಸೂರು ನಗರ 13, ಚಿಕ್ಕಮಗಳೂರು 12, ದಾವಣಗೆರೆ 12, ಬಳ್ಳಾರಿ 12, ಚಿತ್ರದುರ್ಗ 12, ಚಿಕ್ಕಬಳ್ಳಾಪುರ 11, ಬೆಂ.ಗ್ರಾಮಾಂತರ 11, ಬೀದರ್ 11, ಬೆಳಗಾವಿ ದಕ್ಷಿಣ 11, ಬೆಳಗಾವಿ ಉತ್ತರ 10, ವಿಜಯನಗರ 10, ರಾಯಚೂರು 9, ಕೊಡಗು 9, ಬಾಗಲಕೋಟೆ 8, ವಿಜಯಪುರ 8, ಗದಗ 8, ಉಡುಪಿ 8, ಚಾಮರಾಜನಗರ 7, ಯಾದಗಿರಿ 6 ಮತ್ತು ಕೊಪ್ಪಳ 6 ಲೈಸೆನ್ಸ್‌ಗಳು ಹರಾಜಿಗೆ ಸಿದ್ಧವಾಗಿವೆ. ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ನಗರಪಾಲಿಕೆ, ಮಹಾನಗರ ಪಾಲಿಕೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ(ಜಿಬಿಎ) ವಿಭಿನ್ನ ಸನ್ನದು ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರವಾನಗಿಯ ಮೂಲ ಬೆಲೆ 1 ಕೋಟಿ ರೂ.ನಿಂದ 1.5 ಕೋಟಿ ರೂ.ವರೆಗೆ ಆರಂಭವಾಗಲಿದೆ. ಒಂದೊಂದು ಪಾಲಿಕೆಯಲ್ಲಿ ಒಂದೊಂದು ಮೂಲ ಬೆಲೆಯನ್ನು ಇಲಾಖೆ ನಿಗದಪಡಿಸಿದೆ.
ಎಷ್ಟೇ ಬೇಕಾದರೂ ಲೈಸೆನ್ಸ್ ಖರೀದಿಗೆ ಅವಕಾಶ
ಬಿಡ್‌ನಲ್ಲಿ ಭಾಗಿಯಾಗುವ ಬಿಡ್‌ದಾರನು ಎಷ್ಟೂ ಬೇಕಾದರೂ ಲೈಸೆನ್ಸ್ ಖರೀದಿಸಲು ಅವಕಾಶ ನೀಡಲಾಗಿದೆ. ಗೆಲ್ಲುವ ಬಿಡ್ ಮೌಲ್ಯವನ್ನು ಯಶಸ್ವಿ ಬಿಡ್ಡರ್ ಎಂದು ಪರಿಗಣಿಸಲಾಗುತ್ತದೆ. ಗೆಲ್ಲುವ ಬಿಡ್ ಮೌಲ್ಯದ ಕನಿಷ್ಠ ಶೇ.50 ಶುಲ್ಕ ಪಾವತಿಸಿದ ನಂತರ ಅಂಗೀಕಾರ ಪತ್ರ(ಎಲ್‌ಒಎ) ನೀಡಲಾಗುತ್ತದೆ. ಇಲಾಖೆ ನಿಯಮದಂತೆ ನಿಗದಿಪಡಿಸಿದ ವ್ಯಾಪ್ತಿಯಲ್ಲಿ ಸನ್ನದು ಕಾರ್ಯ ಸ್ಥಳ ಆಯ್ಕೆ ಮಾಡಿಕೊಳ್ಳಬಹುದು.
ಅಬಕಾರಿ ಇಲಾಖೆ ನಿಯಮ 12ರಂತೆ ರಾಜ್ಯದ ಪ್ರತಿ ತಾಲೂಕು ಹಾಗೂ ನಗರ ಪ್ರದೇಶಕ್ಕೆ 7,500 ಜನಕ್ಕೆ ಒಂದು ಸಿಎಲ್-2 ಹಾಗೂ 3,500 ಜನಕ್ಕೆ ಹೆಚ್ಚುವರಿ ಸನ್ನದು ನಿಗದಿಪಡಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಜನಕ್ಕೆ ಒಂದು ಸಿಎಲ್2 ಹಾಗೂ 7500 ಜನಕ್ಕೆ ಹೆಚ್ಚುವರಿ ಒಂದು ಸನ್ನದು ನಿಗದಿಯಾಗಿತ್ತು. ತಾಲೂಕಿನ ನಗರ ಪ್ರದೇಶಕ್ಕೆ ‘ಎ’ ಹಾಗೂ ಗ್ರಾಮೀಣ ಪ್ರದೇಶಕ್ಕೆ ‘ಬಿ’ ಎಂದು ಕೋಟಾ ನಿಗದಿಪಡಿಸಲಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ 1987ರಲ್ಲಿ ನಿಯಮ 12ರಂತೆ ಅಂದಿನ ಸರ್ಕಾರವು ರಾಜ್ಯದ ಎಲ್ಲ ತಾಲೂಕಿನಲ್ಲಿ ಕೋಟಾ ನಿಗದಿ ಪಡಿಸಿತ್ತು. 1987ರಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬರುವ ತಾಲೂಕಿಗೆ ಅಬಕಾರಿ ನಿಯಮ 12ರಂತೆ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಕ್ಕೆ ಸಿಎಲ್2 ಕೋಟಾ ನಿಗದಿಯಾಗಿತ್ತು. ನಗರ ಪ್ರದೇಶಕ್ಕೆ ನಿಗದಿಯಾದ ಸಿಎಲ್2 ಕೋಟಾದಂತೆ ನಗರ ಪ್ರದೇಶಕ್ಕೆ 2,158 ಹಾಗೂ ಗ್ರಾಮೀಣ ಪ್ರದೇಶಕ್ಕೆ 2,048 ಸೇರಿ ಒಟ್ಟು 4,206 ಸಿಎಲ್2 ಅಂಗಡಿಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಇದೀಗ ನಗರದ ಪ್ರದೇಶದಲ್ಲಿ 2,510 ಹಾಗೂ ಗ್ರಾಮೀಣ ಪ್ರದೇಶಕ್ಕೆ 1,438 ಸೇರಿ ಒಟ್ಟು 3,948 ಸಿಎಲ್-2 ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ.