Karnataka Budget 2026-27 | ಸಿಎಂ ಸಿದ್ದರಾಮಯ್ಯ 
ರಾಜ್ಯ

56 ಸಾವಿರ ಉದ್ಯೋಗ, 50 ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ: ಸಿಎಂ ಸಿದ್ದರಾಮಯ್ಯ | Karnataka Budget 2026-27

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ತಮ್ಮ 17ನೇ ಬಜೆಟ್ ಮಂಡನೆಯನ್ನು ( Karnataka Budget 2026-27) ಆರಂಭಿಸಿದ್ದು, ಪ್ರಾರಂಭಿಕ ಭಾಷಣದಲ್ಲಿ ರಾಜ್ಯದ ಅಭಿವೃದ್ದಿಗೆ ಒಕ್ಕೂಟ ಸರ್ಕಾರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.
ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸುವುದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಈ ಸಲದ ಬಜೆಟ್‌ನಲ್ಲಿ ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನದ ಭೂಪಟದಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.
ವಿಶ್ವದ ಭೂಪಟದಲ್ಲಿ ಕರ್ನಾಟಕ ಕೇವಲ ಒಂದು ರಾಜ್ಯವಾಗಿ ಉಳಿಯದೇ, ಜಾಗತಿಕ ವಾಣಿಜ್ಯ ಕೇಂದ್ರವಾಗಿ ಮಾರ್ಪಾಡಾಗಿದೆ ಎಂದಿರುವ ಸಿಎಂ, ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ರಾಜ್ಯ ಸಾಧಿಸಿರುವ ಅಪ್ರತಿಮ ಪ್ರಗತಿಯನ್ನು ಸದನದಲ್ಲಿ ತೆರೆದಿಟ್ಟರು.

56 ಸಾವಿರ ಉದ್ಯೋಗಗಳ ಭರ್ತಿಗೆ ಸರ್ಕಾರ ಸಿದ್ಧ

ರಾಜ್ಯದ ನಿರುದ್ಯೋಗಿ ಯುವಜನತೆಯ ಪಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರ್ಷದ ಬಜೆಟ್‌ನಲ್ಲಿ ಬೃಹತ್ ಉಡುಗೊರೆಯನ್ನು ಘೋಷಿಸಿದ್ದು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬರೋಬ್ಬರಿ 56,000 ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. ಬಜೆಟ್ ಭಾಷಣದ ಆರಂಭದಲ್ಲೇ ಈ ಮಹತ್ತರ ಘೋಷಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಯುವ ಸಮೂಹದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ರಾಜ್ಯದ ಪರಂಪರೆಗೆ ಅಂತರಾಷ್ಟ್ರೀಯ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ, ರಾಜ್ಯದ ಬರೋಬ್ಬರಿ 50ಕ್ಕೂ ಹೆಚ್ಚು ವಿಶಿಷ್ಟ ಉತ್ಪನ್ನಗಳಿಗೆ ಜಿಐ (Geographical Indication) ಮಾನ್ಯತೆ ಸಿಕ್ಕಿರುವ ವಿಚಾರವನ್ನು ಸಿಎಂ ಘೋಷಿಸಿದ್ದಾರೆ.

ಕೈಗಾರಿಕಾ ಕ್ರಾಂತಿ ಮತ್ತು ಹೊಸ ಉದ್ಯೋಗದ ಭರವಸೆ

ಕೇವಲ ಪರಂಪರೆ ಮಾತ್ರವಲ್ಲ, ವ್ಯಾಪಾರ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಹೊಸ ಉದ್ಯೋಗ ಸೃಷ್ಟಿಗಾಗಿ ಸರ್ಕಾರವು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದ್ದು, ಯುವಜನತೆಗೆ ಉದ್ಯೋಗದ ಹಾದಿ ಸುಗಮಗೊಳಿಸಿದೆ. ಈ ಮೂಲಕ ರಾಜ್ಯದ ಆರ್ಥಿಕತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಗುರಿಯ ಬಗ್ಗೆ ಸಿಎಂ ಬೆಳಕು ಚೆಲ್ಲಿದ್ದಾರೆ(ಏಜೆನ್ಸೀಸ್​).