- ನಿಮ್ಹಾನ್ಸ್ ನಿಂದ 2024ರಲ್ಲಿ 27 2025ರಲ್ಲಿ 22 ಮಂದಿ ನಾಪತ್ತೆ
- ಕಿದ್ವಾಯಿ ಆಸ್ಪತ್ರೆಯಿಂದ 2024ರಲ್ಲಿ 3 2025ರಲ್ಲಿ 3 ಮಂದಿ ಕಾಣೆ
- * ಜಯನಗರದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು
ಬೆಂಗಳೂರು: ಆರೋಗ್ಯ ಸಮಸ್ಯೆಯಿಂದಾಗಿ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಚಿಕಿತ್ಸೆ ಹಾಗೂ ಸಮಾಲೋಚನೆಗಾಗಿ (ಜ.1, 2024ರಿಂದ ಆ.14, 2025ರವರೆಗೆ) ಬಂದವರಲ್ಲಿ 55 ರೋಗಿಗಳು ಕಾಣೆಯಾಗಿದ್ದಾರೆ. ಅವರಲ್ಲಿ ಮೂವರು ಇನ್ನೂ ಪತ್ತೆಯಾಗಿಲ್ಲ.
ಕಾಣೆಯಾದವರ ಕುರಿತು ಜಯನಗರದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣೆ ಮಾಹಿತಿ ಪ್ರಕಾರ 2024ರ ಮೇ 23ರಂದು ಕಡಪ್ಪ ರೋಡನ್ನವರ್ (81) ಮತ್ತು 2025ರ ನ. 6ರಂದು ಮುನಿಕೃಷ್ಣಪ್ಪ (70) ನಿಮ್ಹಾನ್ಸ್‌ನಿಂದ ನಾಪತ್ತೆಯಾಗಿದ್ದಾರೆ. ಅದೇ ರೀತಿ, 2025ರ ಏ. 30ರಂದು ಶಾಂತಸ್ವಾಮಿ (52) ಕಿದ್ವಾಯಿ ಆಸ್ಪತ್ರೆ ಆವರಣದಿಂದ ಕಾಣೆಯಾಗಿದ್ದಾರೆ. ಇದುವರೆಗೂ ಈ ಮೂವರ ಸುಳಿವು ಸಿಕ್ಕಿಲ್ಲ.
ಈ ರೋಗಿಗಳು ಅತ್ಯಂತ ಅನಿರೀಕ್ಷಿತ ಕ್ಷಣಗಳಲ್ಲಿ ಕಾಣೆಯಾಗಿದ್ದಾರೆ. ಅಂದರೆ ಅವರ ಆರೈಕೆದಾರರು ಅಥವಾ ಕುಟುಂಬದ ಸದಸ್ಯರು ಆಸ್ಪತ್ರೆಯ ಕೌಂಟರ್‌ನಲ್ಲಿ ಬಿಲ್‌ಗಳ ಸಂಗ್ರಹ ಅಥವಾ ಪಾವತಿ ಮಾಡುವಾಗ, ಔಷಧ ಖರೀದಿಸುತ್ತಿದ್ದಾಗ, ಫೋನ್ ಕರೆಗಳಲ್ಲಿ ನಿರತರಾಗಿದ್ದಾಗ, ಹೊರ ರೋಗಿಗಳ ವಿಭಾಗದಲ್ಲಿ ಇತರರೊಂದಿಗೆ ಮಾತನಾಡುತ್ತಿದ್ದಾಗ, ಹೀಗೆ ಅವರುಗಳ ಗಮನ ಬೇರೆಡೆ ಇದ್ದಂತಹ ಸಂದರ್ಭಗಳಲ್ಲಿ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಓಡಿಹೋಗುವ ಪ್ರವೃತ್ತಿ ಹೊಂದಿರುತ್ತಾರೆ. ಅಂತಹವರನ್ನು ಪತ್ತೆಹಚ್ಚಿ ಅವರ ಕುಟುಂಬದ ಸದಸ್ಯರಿಗೆ ಒಪ್ಪಿಸುತ್ತೇವೆ. ಈ ರೀತಿ ಕಾಣೆಯಾದವರ ಪ್ರಕರಣಗಳನ್ನು ಪರಿಶೀಲಿಸಲು ಆಸ್ಪತ್ರೆಯಲ್ಲಿ ಘಟನೆ ವರದಿ ಸಮಿತಿ ಇದೆ. ಹೆಚ್ಚಿನ ಸಂದರ್ಭಗಳಲ್ಲಿ, ಕಾಣೆಯಾದ ರೋಗಿಗಳಲ್ಲಿ ಬಹುತೇಕರು ಸ್ಕಿಜ್ರೋೇನಿಯಾ ಮತ್ತು ಬೈಪೋಲಾರ್ ಅಸ್ವಸ್ಥತೆಗಳಿಂದ ಇನ್ನೂ ಕೆಲವರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುತ್ತಾರೆ ಎಂದು ನಿಮ್ಹಾನ್ಸ್‌ನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥರಿಗೆ ಸಮವಸ್ತ್ರ ನೀಡುವಂತಿಲ್ಲ:
ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ 2017ರ ಪ್ರಕಾರ, ಮಾನಸಿಕ ರೋಗಿಗಳಿಗೆ ಸಮವಸ್ತ್ರ ನೀವಂತಿಲ್ಲ. ಆಸ್ಪತ್ರೆಯು ರೋಗಿಗಳನ್ನು ಗೌರವದೊಂದಿಗೆ ಅವರ ಗೌಪ್ಯತೆಯನ್ನು ಕಾಪಾಡುವ ಜವಾಬ್ದಾರಿ ನಿಭಾಯಿಸಲಾಗುತ್ತದೆ. ಹಾಗಾಗಿ ಚಿಕಿತ್ಸೆ ಅಥವಾ ಸಮಾಲೋಚನೆಗೆ ರೋಗಿಗಳನ್ನು ಕರೆತಂದಾಗ ಅವರ ಮೇಲೆ ನಿಗಾ ಇಡಬೇಕು. ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೂ ಸಹ ಆವರಣದಲ್ಲಿ ಪ್ರತಿಯೊಬ್ಬರ ಚಲನವಲನಗಳನ್ನು ಗಮನಿಸುತ್ತಿರುತ್ತಾರೆ. ಆದರೆ ಕ್ಯಾಂಪಸ್ ತುಂಬ ದೊಡ್ಡದಾಗಿರುವುದರಿಂದ ಕುಟುಂಬದ ಸದಸ್ಯರು ಅಥವಾ ಆರೈಕೆದಾರರ ರೋಗಿಗಳ ಬಗೆಗೆ ಹೆಚ್ಚು ಜಾಗರೂಕರಾಗಿರಬೇಕು ಎನ್ನುತ್ತಾರೆ ನಿಮ್ಹಾನ್ಸ್‌ನ ಉಪ ವೈದ್ಯಕೀಯ ಅಧೀಕ್ಷಕ ಡಾ. ಎಚ್.ಆರ್. ಆರವಿಂದ್.
ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆ ಬರುವವರಲ್ಲಿ ಹೆಚ್ಚಿನವರು 3 ಮತ್ತು 4ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುತ್ತಾರೆ. ಹಾಗಾಗಿ ರೋಗಿಗಳು ಭರವಸೆ ಕಳೆದುಕೊಳ್ಳದಂತೆ ಅವರಿಗೆ ಪ್ರವೇಶ, ದಾಖಲಾತಿ, ಚಿಕಿತ್ಸೆ ಜತೆಗೆ ಮಾನಸಿಕ ಬೆಂಬಲ ಸಹ ಒದಗಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಒತ್ತಡ ತಗ್ಗಿಸಿ ರೋಗಿಗಳು ತಪ್ಪಿಸಿಕೊಳ್ಳುವುದನ್ನು ತಡೆಯಲು ರಾಜ್ಯದ 16 ಜಿಲ್ಲೆಗಳಲ್ಲಿ ಡೇ ಕೇರ್ ಕಿಮೊಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸ್ಥಳೀಯವಾಗಿಯೇ ಚಿಕಿತ್ಸೆ ಪಡೆಯಬಹುದಾಗಿದೆ.