ರಸ್ತೆ ಸುರಕ್ಷತೆ ಹಾಗೂ ಟ್ರಾಫಿಕ್ ನಿಯಮಗಳ ಪಾಲನೆ ಕುರಿತು ಸಂಚಾರ ಪೊಲೀಸರಿಂದ ಜಾಗೃತಿ ಅಭಿಯಾನ, ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ಸಂದೇಶ ನೀಡುತ್ತಿದ್ದರೂ ಅಪಘಾತಗಳ ಸಂಖ್ಯೆ ಮಾತ್ರ ಏರಿಕೆಯಾಗುತ್ತಲೇ ಇದೆ. 2022ರಿಂದ 2026ರ ಮೇವರೆಗೆ 2.31 ಲಕ್ಷ ಜನರು ಆಕ್ಸಿಡೆಂಟ್ಗಳಲ್ಲಿ ಗಾಯಗೊಂಡಿದ್ದಾರೆ. ಪ್ರತಿ ಲಕ್ಷ ಜನರ ಪೈಕಿ ಶೇ 19.28 ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪ್ರಸಕ್ತ ವರ್ಷದ 5 ತಿಂಗಳಲ್ಲಿ ಅಂದಾಜು 5,154 ಮಂದಿ ಬೈಕ್, ಕಾರು ಹಾಗೂ ಇತರೆ ವಾಹನದಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಾರ್ಯಲಯ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಸಂಭವಿಸುವ ಮಾರಣಾಂತಿಕ ಅಪಘಾತಗಳಿಗೆ ಅತಿವೇಗ, ನಿರ್ಲಕ್ಷ್ಯದ ಚಾಲನೆ ಹಾಗೂ ಹೆಲ್ಮೆಟ್- ಸೀಟ್ ಬೆಲ್ಟ್ ಬಳಕೆಯ ಕೊರತೆ ಪ್ರಮುಖ ಕಾರಣಗಳಾಗಿವೆ. ಓವರ್ಟೇಕ್, ಲೇನ್ ಶಿಸ್ತು ಪಾಲಿಸದಿರುವುದು, ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು, ಮದ್ಯಪಾನ ಮಾಡಿ ವಾಹನ ಚಾಲನೆ, ಮೊಬೈಲ್ ಬಳಕೆ ಕೂಡ ಪ್ರಮುಖ ಕಾರಣವಾಗಿದೆ. ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು. ರಸ್ತೆ ದುಸ್ಥಿತಿ, ಅಸಮರ್ಪಕ ಸೂಚನಾ ಫಲಕಗಳು ಮತ್ತು ಬೆಳಕಿನ ಕೊರತೆ ಇರುವ ಬ್ಲ್ಯಾಕ್ಸ್ಪಾಟ್ಗಳು ಅಮಾಯಕರ ಪ್ರಾಣಕ್ಕೆ ಎರವಾಗುತ್ತಿವೆ.
ರಾಜ್ಯ ಸಂಚಾರ ಪೊಲೀಸ್ ಇಲಾಖೆ ರಸ್ತೆ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಅತಿ ವೇಗ ಪತ್ತೆಗೆ ಇಂಟರ್ಸೆಪ್ಟರ್ ವಾಹನಗಳಿಂದ ತಪಾಸಣೆ, ಸ್ಪೀಡ್ ಗನ್ಗಳು ಹಾಗೂ ಎ.ಐ. ಆಧಾರಿತ ಕ್ಯಾಮರಾ ವ್ಯವಸ್ಥೆ ಮಾಡಿದೆ. ಬೆಂಗಳೂರು, ಮೈಸೂರು ಸೇರಿ ಪ್ರಮುಖ ನಗರಗಳಲ್ಲಿ ಸ್ವಯಂಚಾಲಿತ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಜಾರಿ ಮಾಡುವ ಮೂಲಕ ನಿಯಮ ಉಲ್ಲಂಘನೆ ಪತ್ತೆಹಚ್ಚಿ ಇ-ಚಲನ್ ನೀಡಲಾಗುತ್ತಿದೆ. ಡ್ರಂಕ್ ಆಂಡ್ ಡ್ರೖೆವ್ ವಿಶೇಷ ಕಾರ್ಯಾ ಚರಣೆ, ವಾರಾಂತ್ಯಗಳಲ್ಲಿ ತಪಾಸಣೆ ಹೆಚ್ಚಳ, ಹೆಲ್ಮೆಟ್ ಮತ್ತು ಸೀಟ್ಬೆಲ್ಟ್ ನಿಯಮ ಕಡ್ಡಾಯ ಪಾಲನೆಗೆ ವಿಶೇಷ ಅಭಿಯಾನ, ಶಾಲೆ- ಕಾಲೇಜು, ಐಟಿ ಕಂಪನಿಗಳು ಮುಂತಾದ ಸ್ಥಳಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಆರಂಭಿಸಿದೆ.
ಅಪಘಾತ ವಲಯಗಳನ್ನು ಗುರುತಿಸಿ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಮನ್ವಯ ಸಾಧಿಸಿ ರಸ್ತೆ ಸುಧಾರಣೆ, ಅಪಘಾತದ ನಂತರ ತ್ವರಿತ ಚಿಕಿತ್ಸೆಗೆ ಗೋಲ್ಡನ್ ಅವರ್ ವ್ಯವಸ್ಥೆ ಹಾಗೂ ತುರ್ತು ಸೇವೆಗಳ ಸಮನ್ವಯ ಮತ್ತು ಪದೇ ಪದೇ ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಪರವಾನಗಿ ಅಮಾನತು-ರದ್ದುಪಡಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗುತ್ತಿದೆ. ಆದರೂ ವಾಹನ ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳ ಸಂಖೆ ಏರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.