- ಗಣಿ ಸುರಕ್ಷತಾ ನಿರ್ದೇಶನಾಲಯ ಅಧಿಕಾರಿಗಳು ಭೇಟಿ
- ಎರಡು ಕ್ವಾರಿ ಮಾಲೀಕರು ಸೇರಿ ಮೂವರ ಬಂಧನ
- 7 ಮೃತದೇಹಗಳಲ್ಲಿ ಒಂದು ಮಾತ್ರ ಕುಟುಂಬಸ್ಥರಿಗೆ ಹಸ್ತಾಂತರ
ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಯಮ ಉಲ್ಲಂಸಿ ನಡೆಸುತ್ತಿದ್ದ ಕ್ವಾರಿಯಲ್ಲಿ ಕಲ್ಲುಬಂಡೆ ಕುಸಿದು 7 ಮಂದಿ ಕಾರ್ಮಿಕರ ಸಾವಿಗೆ ಕಾರಣವಾಗಿರುವ ಎರಡು ಕ್ವಾರಿಗಳ ಪರವಾನಗಿ ಅಮಾನತುಗೊಳಿಸಿರುವ ಅಧಿಕಾರಿಗಳು, ಬೆಂಗಳೂರು ದಕ್ಷಿಣ( ರಾಮನಗರ) ವ್ಯಾಪ್ತಿಯ 54 ಕ್ವಾರಿಗಳನ್ನು ತಾತ್ಕಲಿಕವಾಗಿ ಬಂದ್‌ಗೊಳಿಸಿದ್ದಾರೆ.
ತಾವರೆಕೆರೆ ಹೋಬಳಿ ಸಮೀಪದ ಕಾವೇರಿ ಕನ್‌ಸ್ಟ್ರಕ್ಷನ್ ಹಾಗೂ ಬಸವೇಶ್ವರ ಕ್ವಾರಿ ಸೇರಿ ಹುಲಿವೆನಹಳ್ಳಿ, ದೇವನಹಳ್ಳಿ, ಮಾದಾಪಟ್ಟಣ ಸೇರಿ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ಕ್ವಾರಿಗಳನ್ನು ನಿಲ್ಲಿಸಲಾಗಿದೆ. ಮತ್ತೊಂದೆಡೆ ಅಮಾಯಕ ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಬಸವೇಶ್ವರ ಕ್ವಾರಿ ಲೀಜ್ ಪಡೆದು ನಡೆಸುತ್ತಿದ್ದ ಪಾಂಡುರಂಗ, ಕ್ರಷರ್ ಮತ್ತು ಕ್ವಾರಿ ಮೇಲ್ವಿಚಾರಕ ಎನ್ ಲೋಕೇಶ್ ಹಾಗೂ ನಿನ್ನೆ ನಾಪತ್ತೆಯಾಗಿದ್ದ ಕಾವೇರಿ ಸ್ಟೋನ್ಸ್ ಕ್ರಷರ್ ಮಾಲೀಕ ರಾಜು ಬಿನ್ ನರಸೇಗೌಡ ಅವರನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಏಳು ಕಾರ್ಮಿಕರ ಸಾವಿನ ದುರಂತ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗಣಿ ಸುರಕ್ಷತಾ ನಿರ್ದೇಶನಾಲಯ ಅಧಿಕಾರಿಗಳ (ಡಿಜಿಎಂಎಸ್) ತಂಡ ಆಗಮಿಸಿ ಘಟನೆ ನಡೆದ ಕ್ವಾರಿ ಸ್ಥಳ ಪರಿಶೀಲನೆ ನಡೆಸುತ್ತಿದೆ. ಅಲ್ಲದೇ ಬೆಂಗಳೂರು ದಕ್ಷಿಣ ಭಾಗದ ಎಲ್ಲ ಕ್ವಾರಿಗಳನ್ನು ಪರಿಶೀಲನೆ ನಡೆಸಿ ವರದಿಯನ್ನು ಕೇಂದ್ರಕ್ಕೆ ನೀಡಲು ಮುಂದಾಗಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿರುವ ನಿಯಂತ್ರಕ ಸಂಸ್ಥೆ ಇದಾಗಿದೆ. ಕಲ್ಲಿದ್ದಲು, ಲೋಹ ಮತ್ತು ತೈಲ ಗಣಿಗಳಲ್ಲಿನ ಕಾರ್ಮಿಕರ ಔದ್ಯೋಗಿಕ ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣವನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ಹೊಂದಿದೆ. ಡಿಜಿಎಂಎಸ್ ಅಧಿಕಾರಿಗಳು ನೀಡುವ ವರದಿ ಮೇಲೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೂ ಪರಿಣಾಮ ಬಿರಲಿದೆ.
ಅಕ್ರಮದಾರರಿಗೆ ನಡುಕ:
ಅಧಿಕಾರಿಗಳ ಮೇಲೆ ಪ್ರಭಾವ ಹಾಗೂ ರಾಜಕೀಯ ಒತ್ತಡ ಹೇರಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮದ ದಂಧೆಕೋರರಿಗೆ ನಡುಕ ಶುರುವಾಗಿದೆ. ಪರವಾನಗಿ ಅವಧಿ ಮುಕ್ತಾಯಗೊಂಡರು ರಾತ್ರೋ ರಾತ್ರಿ ಕಲ್ಲುಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಮತ್ತೊಂದು ಕಡೆ ಪರವಾನಗಿ ಪಡೆದಿರುವುದು ಒಂದು ಕಡೆಯಾದರೆ, ಕಲ್ಲು ಕ್ವಾರಿ ನಡೆಸುತ್ತಿರುವುದು ಸ್ಥಳ ಮತ್ತೊಂದು ಕಡೆ. ಹೀಗೆ ಅಕ್ರಮ ದಂಧೆ ನಡೆಸುತ್ತಿರುವುದಕ್ಕೆ ತಾತ್ಕಾಲಿಕ ಸ್ಥಗಿತಗೊಂಡಿದೆ. ಇಂತಹ ಅಕ್ರಮ ಚಟುವಟಿಕೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಶಾಮಿಲಾಗಿದ್ದಾರೆ. ಏಳು ಜನ ಕಾರ್ಮಿಕರ ಸಾವಿನ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡರೆ ಕೆಲ ಅಧಿಕಾರಿಗಳು ಸೇರಿ ಅಕ್ರಮದಾರರಿಗೆ ಸಂಕಷ್ಟ ಎದುರಾಗಲಿದೆ.
ತಡರಾತ್ರಿ ಮರಣೋತ್ತರ ಪರೀಕ್ಷೆ
6 ಮೃತ ದೇಹಗಳು ಆಸ್ಪತ್ರೆಯಲ್ಲಿ, ಒಂದು ಮಾತ್ರ ಹಸ್ತಾಂತರ
ಕಲ್ಲು ಬಂಡೆ ಅಡಿಯಲ್ಲಿ ಸಿಲುಕಿ ಮೃತಪಟ್ಟ ಏಳು ಮಂದಿ ಕಾರ್ಮಿಕರ ಮೃತ ದೇಹಗಳನ್ನು ನಿನ್ನೆ ತಡರಾತ್ರಿ ಆರ್.ಆರ್. ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆ ಪೈಕಿ ಯಾದಗಿರಿ ಜಿಲ್ಲೆಯ ರಾಮ ನಾಯ್ಕ (46) ಎಂಬುವರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮಧ್ಯಪ್ರದೇಶದ ರಾಜಪಾಲ್ ಸಿಂಗ್ (35), ಸತ್ಯನಾರಾಯಣ ಸಿಂಗ್ (31), ರಾಮವತಾರ ಸಿಂಗ್ (31), ರಾಜೇಶ್ ಪ್ರಸಾದ್ (32), ಧರ್ಮೆಶ್ ಸಿಂಗ್ (30), ಛತ್ತೀಸ್‌ಗಡ ಮೂಲದ ಸಿಮ್ರಾನ್ ಖಾನ್(34) ಕಾರ್ಮಿಕರ ಮೃತ ದೇಹಗಳನ್ನು ಇಂದು (ಶನಿವಾರ) ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ಮುಂದುವರೆದಿದೆ.
ಕಲ್ಲಿನ ಕ್ವಾರಿ ದುರಂತಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಘಟನೆ ಕುರಿತು ಗಣಿ ಇಲಾಖೆಗೆ ವರದಿ ಹಾಗೂ ದಾಖಲೆ ನೀಡುವಂತೆ ಸೂಚಿಸಲಾಗಿದೆ. ಕಾರ್ಮಿಕರ ದೂರು ಆಧರಿಸಿ ತಾವರೆಕರೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
-ಡಾ.ಆರ್.ಹಿತೇಂದ್ರ, ಕಾನೂನು ಸುವ್ಯವಸ್ಥೆ ಎಡಿಜಿಪಿ.