ಬೆಂಗಳೂರು: ಗೃಹಲಕ್ಷ್ಮಿ ಯೋಜನೆ 26ನೇ ಕಂತಿನ ತಲಾ 2 ಸಾವಿರ ರೂ. ಫಲಾನುಭವಿಗಳ ಖಾತೆಗೆ ಜಮೆ ಆಗಿದೆ. ಇದರೊಂದಿಗೆ ಪ್ರತಿ ಮನೆಯ ಯಜಮಾನಿಗೆ ಈವರೆಗೆ ಒಟ್ಟಾರೆ 52 ಸಾವಿರ ರೂ. ಕೈಸೇರಿದೆ ಎಂದು ಶಾಸಕ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ರಾಜ್ಯ ಸರ್ಕಾರವು ತನ್ನ ಐದು ಗ್ಯಾರಂಟಿ ಯೋಜನೆಗಳ ಮೂಲಕ ಬರೋಬ್ಬರಿ 1,20,433 ಕೋಟಿ ರೂ. ನೇರವಾಗಿ ಜನರ ಖಾತೆಗೆ ವರ್ಗಾಯಿಸಿ ನುಡಿದಂತೆ ನಡೆದಿದೆ. ಗೃಹಲಕ್ಷ್ಮಿ ಯೋಜನೆಯಡಿ 1,24,10,629 ಮಹಿಳೆಯರು ನೋಂದಣಿ ಆಗಿದ್ದಾರೆ. ಈ ಯೋಜನೆಗಾಗಿ ಸರ್ಕಾರ 62,345.34 ಕೋಟಿ ರೂ. ವೆಚ್ಚ ಮಾಡಿದೆ. 26 ಕಂತುಗಳ ಹಣ ಯಶಸ್ವಿಯಾಗಿ ಪಾವತಿಯಾಗಿದ್ದು, 27ನೇ ಕಂತಿನ ಅನುದಾನ ಖಜಾನೆಯಿಂದ ಬಿಡುಗಡೆಗೊಳಿಸಲಾಗಿದೆ. ಶೀಘ್ರದಲ್ಲೇ 31 ಜಿಲ್ಲೆಗಳ ಫಲಾನುಭವಿಗಳಿಗೆ ತಲುಪಲಿದೆ ಎಂದು ವಿವರಿಸಿದ್ದಾರೆ.
ಗೃಹಲಕ್ಷ್ಮಿಯೋಜನೆಯಿಂದ ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳು ಕೇವಲ ಹಣದ ಸಹಾಯವಲ್ಲ, ಗೌರವದ ಭರವಸೆ. ಪಕ್ಷಭೇದವಿಲ್ಲದೆ ಎಲ್ಲರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಿದೆ. ಕೇವಲ ಹಣದ ಸಹಾಯವಲ್ಲ, ಗೌರವದ ಭರವಸೆ.
ಗೃಹಲಕ್ಷ್ಮಿ ಯೋಜನೆಯಲ್ಲಿ 1,24,10,629 ಮಹಿಳಾ ಫಲಾನುಭವಿಗಳಿಗೆ 2000 ರೂ.ನಂತೆ 62,345.34 ಕೋಟಿ ವೆಚ್ಚ, ಗೃಹಜ್ಯೋತಿ ಯೋಜನೆಯಲ್ಲಿ1,65,65,000 ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು, 22,839 ಕೋಟಿ ರೂ. ವೆಚ್ಚವಾಗಿದೆ. ಶಕ್ತಿ ಯೋಜನೆಯಲ್ಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿದ್ದು, 679.20 ಕೋಟಿ ಉಚಿತ ಟಿಕೆಟ್‌ಗಳನ್ನು ನೀಡಿದ್ದು, 17,606 ಕೋಟಿ ವೆಚ್ಚವಾಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಬಡ ಕುಟುಂಬಗಳಿಗೆ ಉಚಿತ ಅಕ್ಕಿ/ಹಣ ವಿತರಿಸುವ ಈ ಯೋಜನೆಗೆ 16,000 ಕೋಟಿ ರೂ.ವ್ಯಯಿಸಲಾಗಿದೆ. ಯುವನಿಧಿ ಯೋಜನೆ: 3,08,267 ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ಆರ್ಥಿಕ ನೆರವು ನೀಡಲಾಗುತ್ತಿದ್ದು, 915 ಕೋಟಿ ರೂ. ನೇರವಾಗಿ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ದಿನೇಶ್ ಗೂಳಿಗೌಡ ಮಾಹಿತಿ ನೀಡಿದ್ದಾರೆ.