rescued child labour 
ರಾಜ್ಯ

ಬೆಂಗಳೂರು ಪೊಲೀಸರಿಂದ 503 ಬಾಲಕಾರ್ಮಿಕರ ರಕ್ಷಣೆ

ರವಿ ನಾಯಕ್

ಪ್ರಮುಖ ಮುಖ್ಯಾಂಶಗಳು

  • 11 ಡಿಸಿಪಿ ವಿಭಾಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ
  • 18 ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ
  • ನಗರಾದ್ಯಂತ 5,898 ಸ್ಥಳಗಳ ಮೇಲೆ ದಾಳಿ
ಬೆಂಗಳೂರು: ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಸಮರ ಸಾರಿರುವ ರಾಜ್ಯ ಪೊಲೀಸ್ ಇಲಾಖೆ ಬರೊಬ್ಬರಿ 800 ಬಾಲಕಾರ್ಮಿಕರನ್ನು ರಕ್ಷಣೆ ಮಾಡಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 503 ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ.
ನಗರದ 11 ಡಿಸಿಪಿಗಳು, ತಮ್ಮ ವಿಭಾಗದ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ‘ಬಾಲಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ’ ನಡೆಸಿ ಒಟ್ಟು 18 ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ರಾಜಧಾನಿಯ 180ಕ್ಕೂ ಅಧಿಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಗ್ಯಾರೇಜ್, ವಿವಿಧ ಕಂಪನಿ ಮಾರ್ಟ್, ಹೋಟೆಲ್, ಕಿರಾಣಿ ಅಂಗಡಿ, ಬೇಕರಿ, factory, ಬಾರ್ ಮತ್ತು ರೆಸ್ಟೋರೆಂಟ್ ಮತ್ತು ನಿರ್ಮಾಣ ಹಂತದ ಕಟ್ಟಡಗಳು ಸೇರಿ ವಿವಿಧ ವಾಣಿಜ್ಯ ಮಳಿಗೆಗಳ ಒಟ್ಟು 5,898 ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.
ಕೇಂದ್ರ ವಿಭಾಗ ವ್ಯಾಪ್ತಿಯಲ್ಲಿ 63 ಬಾಲಕರ ರಕ್ಷಣೆ, ದಕ್ಷಿಣದಲ್ಲಿ 54 ಬಾಲಕರ ರಕ್ಷಣೆ, ಪಶ್ಚಿಮದಲ್ಲಿ-84, ಉತ್ತರದಲ್ಲಿ-62, ನೈಋತ್ಯದಲ್ಲಿ-17 ಬಾಲಕರನ್ನು ರಕ್ಷಿಸಿ 3 ಪ್ರಕರಣ ದಾಖಲು, ವಾಯವ್ಯದಲ್ಲಿ-14 ಬಾಲಕರನ್ನು ರಕ್ಷಿಸಿ 2 ಪ್ರಕರಣ ದಾಖಲು, ಪೂರ್ವದಲ್ಲಿ-71 ಬಾಲಕರನ್ನು ರಕ್ಷಿಸಿ 3 ಪ್ರಕರಣ ದಾಖಲು, ಈಶ್ಯಾನ್ಯದಲ್ಲಿ-55 ಬಾಲಕರ ರಕ್ಷಣೆ, ಆಗ್ನೇಯ-13, ಎಲೆಕ್ಟ್ರಾನಿಕ್ ಸಿಟಿ-3, ವೈಟ್‌ಫೀಲ್ಡ್-22 ಮತ್ತು ಸಿಸಿಬಿ ವಿಭಾಗದಿಂದ 45 ಬಾಲಕರನ್ನು ರಕ್ಷಿಸಿ 9ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣೆಯಾದ ಬಾಲಕರ ಪೈಕಿ ಬಹುತೇಕರು ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನದವರಾಗಿದ್ದು, ಎಲ್ಲ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ (ಸಿಡಬ್ಲೂೃಸಿ) ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಡಿಯಲೆಂದೇ ತಮ್ಮ ಓದನ್ನು ಮೊಟಕುಗೊಳಿಸಿ ಬಂದವರ ಸಂಖ್ಯೆಯೂ ಅಧಿಕವಾಗಿದ್ದು, ಅದರಲ್ಲಿ ಹೊರರಾಜ್ಯದವರೇ ಹೆಚ್ಚು ಜನರಿದ್ದಾರೆ. ಕೆಲವರು ತಮ್ಮ ಆಧಾರ್ ಕಾರ್ಡ್ ತಿದ್ದುಪಡೆ ಮಾಡಿಸಿಕೊಂಡು ಕೆಲಸಕ್ಕೆ ಸೇರಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ನಗರದ 11 ವಿಭಾಗದ ಡಿಸಿಪಿಗಳು ಹಾಗೂ ಎಲ್ಲ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಮತ್ತು ಪೊಲೀಸ್ ಸಿಬ್ಬಂದಿ ಇದ್ದರು.

ಸಿಎಂ ದಾಳಿ ಬೆನ್ನಲ್ಲೆ ರಕ್ಷಣೆ ಕಾರ್ಯಾಚರಣೆ ಚುರುಕು:

ಸೆ.8ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನಗರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ್ದರು. ಆ ವೇಳೆ 19 ಬಾಲಕಾರ್ಮಿಕರು ಪತ್ತೆಯಾಗಿದ್ದರು. ಕೂಡಲೇ ಅವರನ್ನು ರಕ್ಷಿಸಿ ಒಟ್ಟು ನಾಲ್ವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಈ ಹಿನ್ನೆಲೆ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರ ಮುಂದುವರಿದ ಭಾಗವಾಗಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಶಾಲೆಗೆ ಕಳುಹಿಸಲು ಕ್ರಮ..!

ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯು ರಕ್ಷಿಸಲ್ಪಟ್ಟ ಬಾಲಕರನ್ನು ಅವರ ಪಾಲಕರಿಗೆ ಒಪ್ಪಿಸುವ ಕಾರ್ಯ ಮಾಡಲಿದೆ. ಬಡತನ ಅಥವಾ ಅನಿವಾರ್ಯತೆಯಿಂದ ಮಕ್ಕಳನ್ನು ಕೆಲಸಕ್ಕೆ ಕಳುಹಿಸಿದ್ದರೆ, ಅಂತಹ ಪಾಲಕರಿಗೆ ಮನವರಿಕೆ ಮಾಡಿ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸುವಂತೆ ಸೂಚಿಸಲಿದ್ದಾರೆ.