Exam Fear 
ರಾಜ್ಯ

ಪರೀಕ್ಷೆಗೆ ಹೆದರಿ 5 ವಿದ್ಯಾರ್ಥಿಗಳು ನಾಪತ್ತೆ! ಹಾವೇರಿ ಮೊರಾರ್ಜಿ ಶಾಲೆಯಲ್ಲಿ ಏನಾಗ್ತಿದೆ? | Exam Fear

ರಾಣೇಬೆನ್ನೂರು (ಹಾವೇರಿ): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ (Exam Fear) ಆವರಿಸುತ್ತಿರುವುದು ಹೊಸದೇನಲ್ಲ. ಆದರೆ, ಹಾವೇರಿ ಜಿಲ್ಲೆಯಲ್ಲಿ ಈ ಭಯದಿಂದಾಗಿ ಐವರು ವಿದ್ಯಾರ್ಥಿಗಳು ಏಕಾಏಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಸುಣಕಲಬಿದರಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಐವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಇಂದು ಬೆಳಿಗ್ಗೆಯಿಂದ ಕಾಣೆಯಾಗಿದ್ದಾರೆ. ಪರೀಕ್ಷೆ ಎದುರಿಸಲು ಹೆದರಿ ಈ ವಿದ್ಯಾರ್ಥಿಗಳು ಶಾಲೆಯಿಂದ ಹೊರಹೋಗಿದ್ದಾರೆ ಎನ್ನಲಾಗುತ್ತಿದೆ.
ಈ ಗಂಭೀರ ವಿಷಯದ ಬಗ್ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ಮುಚ್ಚಿಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಬ್ದುಲ್ ಮಿರ್ಜಾನವರ್ ಮತ್ತು ವಸತಿ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್ ಅವರು ಮಕ್ಕಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.
ಪರೀಕ್ಷಾ ಭಯವೇ ಕಾರಣ?
ನಾಪತ್ತೆಯಾಗಿರುವ ಐದೂ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಬಗ್ಗೆ ತೀವ್ರ ಆತಂಕವಿತ್ತು ಎಂದು ಸಹಪಾಠಿಗಳು ಮತ್ತು ಶಾಲಾ ಮೂಲಗಳು ತಿಳಿಸಿವೆ. ಪರೀಕ್ಷೆಯಲ್ಲಿ ಫೇಲ್ ಆಗುವ ಭಯ ಅಥವಾ ಒತ್ತಡದಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.