ರಾಜ್ಯ

ಬಡವರಿಗೆ 5 ಲಕ್ಷ ಸೈಟ್​: ಡಿಸೆಂಬರ್​, ಜನವರಿಯೊಳಗೆ ನಿವೇಶನ ಹಂಚಿಕೆಯ ಗುರಿ: ಸಂಪುಟ ಸಭೆಯ ಪ್ರಮುಖಾಂಶಗಳು ಹೀಗಿವೆ!

  • ಕೃಷಿ ವಿಸ್ತಾರ ಯೋಜನೆ ಜಾರಿಗೆ ಹಸಿರು ನಿಶಾನೆ, ಕೃಷಿಗೆ ಪೂರಕ ಉದ್ಯಮಕ್ಕೆ ಸಹಾಯಧನ

  • ಹಿಂದುಳಿದ ವರ್ಗಗಳ 7 ನಿಗಮಗಳ ಸಾಲದ ಮೇಲಿನ 236 ಕೋಟಿ ರೂಪಾಯಿ ಬಡ್ಡಿ ಮನ್ನಾ

  • ಕೆಪಿಎಸ್ಸಿ ಸದಸ್ಯ ಸ್ಥಾನದಿಂದ ಬಿ.ವಿ. ಗೀತಾ ಅವರನ್ನು ಅಮಾನತುಗೊಳಿಸಲು ರಾಜ್ಯಪಾಲರಿಗೆ ಶಿಫಾರಸು

ಬೆಂಗಳೂರು: ರಾಜ್ಯದ ವಸತಿರಹಿತ ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡಿದೆ. ವಿವಿಧ ವಸತಿ ಯೋಜನೆಗಳಾದ ಬಸವ ವಸತಿ ಯೋಜನೆ, ಅಂಬೇಡ್ಕರ್​ ನಿವಾಸ್​ ಯೋಜನೆ, ಆಶ್ರಯ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಐದು ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಜತೆಗೆ ಎರಡನೇ ಹಂತದಲ್ಲಿ ಮತ್ತೆ ಐದು ಲಕ್ಷ ನಿವೇಶನ ಗುರುತಿಸಿ ಹಂಚಿಕೆ ಮಾಡಲು ನಿರ್ಣಯಿಸಲಾಗಿದೆ.

ನಿವೇಶನ ಹಂಚಿಕೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಗ್ರಾಮ ಸಭೆಗಳು ಮತ್ತು ಸ್ಥಳೀಯ ಸಮಿತಿಗಳ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಅಲ್ಲದೆ, ಹಂಚಿಕೆಯಾದ ನಿವೇಶನಗಳಲ್ಲಿ ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್​ ಸಂಪರ್ಕದಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಂಪುಟ ಅನುಮೋದನೆ ನೀಡಲಾಗಿದೆ.

ವಸತಿ ಯೋಜನೆ ಮುಖ್ಯಾಂಶ

  1. ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿ ಆಧಾರಿತವಾಗಿ 1 ಲಕ್ಷ ಹೊಸ ಮನೆಗಳನ್ನು ನಿರ್ಮಿಸುವ ಗುರಿ ಜಾರಿಗೆ ಅನುಮೋದನೆ

  2. ರಾಜೀವ್​ ಗಾಂಧಿ ವಸತಿ ನಿಗಮದಿಂದ ಅನುಷ್ಠಾನಗೊಳ್ಳಲಿರುವ ಯೋಜನೆಗೆ 2,241 ಕೋಟಿ ರೂ ಅಂದಾಜು ವೆಚ್ಚ ನಿಗದಿ

  3. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸಹಾಯಧನ 2 ಲಕ್ಷ ರೂ.ಗೆ ಹೆಚ್ಚಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಸಹಾಯಧನ ಮೂರು ಲಕ್ಷ ರೂಪಾಯಿಗೆ ಏರಿಕೆ

  4. ನಮ್ಮ ಮನೆ ಯೋಜನೆಯಡಿ ಸಮುದಾಯದ ಶ್ರಮಿಕರಿಗೆ ಶೇ. 50ರ ರಿಯಾಯಿತಿ ದರದಲ್ಲಿ 30 ಸಾವಿರ ನಿವೇಶನ (30&40 ) ಒದಗಿಸುವುದು

  5. ಗೃಹ ಮಂಡಳಿ ವತಿಯಿಂದ ರಾಜ್ಯವ್ಯಾಪಿ ಜಮೀನಿನ ಲಭ್ಯತೆಯಂತೆ 6,600 ಎಕರೆ ಪ್ರದೇಶದಲ್ಲಿ 93,240 ನಿವೇಶನ ಅಭಿವೃದ್ಧಿ

  6. ಇಡಬ್ಲ್ಯೂಎಸ್​ , ಎಲ್​ಐಜಿ, ಎಂಐಜಿ ಮತ್ತು ಎಚ್​ಐಜಿ ವರ್ಗದ ನಿವೇಶನಗಳನ್ನು ಒಳಗೊಂಡಿರುವ ಈ ಬಡಾವಣೆಗಳ ಅಭಿವೃದ್ಧಿಗೆ 11,655 ಕೋಟಿ ರೂ.ವೆಚ್ಚ

ಚುನಾವಣೆ ಮೇಲೆ ಸರ್ಕಾರ ನಿಗಾ: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಮಹಾನಗರ ಪಾಲಿಕೆ ಚುನಾವಣೆಗಳ ಮೇಲೆ ಆಡಳಿತಾರೂಢ ಸರ್ಕಾರವು ವಿಶೇಷ ನಿಗಾ ವಹಿಸುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶಗಳು ರಾಜ್ಯ ಸರ್ಕಾರದ ಜನಪ್ರಿಯತೆ ಮತ್ತು ಆಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿರುತ್ತವೆ. ಮುಂಬರುವ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಗಳಿಗೆ ಇದು ದಿಕ್ಸೂಚಿಯಾದ್ದರಿಂದ ಸರ್ಕಾರವು ಹೆಚ್ಚಿನ ಗಮನ ಹರಿಸಿದೆ.

ಸಚಿವರಿಗೆ ಸಿಎಂ ಸೂಚನೆ: ಭಾರತ್​ ಜೋಡೋ ಯುವಕ ಸಂಘಗಳಿಗೆ ವೇಗ ನೀಡಲು ಸಚಿವರು ವಿಶೇಷ ಗಮನ ಹರಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಚಿವರಿಗೆ ತಾಕೀತು ಮಾಡಿರುವ ಸಿಎಂ, ಅರ್ಹ ಯುವಕರ ತಂಡ ರಚಿಸಿ, ಭಾರತ್​ ಜೋಡೋ ಸಂಘ ರಚಿಸುವಲ್ಲಿ ಸಚಿವರು ಕಾರ್ಯ ಪ್ರವೃತ್ತರಾಗಬೇಕು, ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ಪಡೆಯಲು ನಿರ್ದೇಶನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಐದು ಲಕ್ಷ ನಿವೇಶನ ಹಂಚಿಕೆ ಮಾಡಲು 24 ಸಾವಿರ ಎಕರೆ ಜಾಗವನ್ನು ಗುರುತಿಸಲಾಗಿದೆ. ಜತೆಗೆ ಮೂಲಸೌಕರ್ಯಕ್ಕಾಗಿ ಹಣ ಮೀಸಲಿಟ್ಟಿದ್ದು, ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.
ಜಿ.ಪರಮೇಶ್ವರ ಉಪ ಮುಖ್ಯಮಂತ್ರಿ

ಬಸವ ಮಂಟಪ ಕೃತಿ ಮುಟ್ಟುಗೋಲು

ಬಸವಣ್ಣನವರ ವ್ಯಕ್ತಿತ್ವ, ಶರಣ ಪರಂಪರೆಗೆ ಧಕ್ಕೆ ತರುವ ರೀತಿಯಲ್ಲಿ ಬರೆಯಲಾಗಿದೆ ಎನ್ನಲಾದ ರವಿ ಹಂಜ್​ ಅವರ ವಿವಾದಾತ್ಮಕ ಕೃತಿ "ಬಸವ ಮಂಟಪ' ಮುಟ್ಟುಗೋಲು ಹಾಕಿಕೊಳ್ಳಲು ಸಿಎಂ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ

ಬಸವಣ್ಣನವರ ವ್ಯಕ್ತಿತ್ವ ಹಾಗೂ ಶರಣ ಪರಂಪರೆಗೆ ಧಕ್ಕೆ ತರುವ ರೀತಿಯಲ್ಲಿ ಬರೆಯಲಾಗಿದೆ ಎನ್ನಲಾದ ರವಿ ಹಂಜ್​ ಅವರ ವಿವಾದಾತ್ಮಕ ಕೃತಿ "ಬಸವ ಮಂಟಪ' ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಚಿವರಾದ ಎಂ.ಬಿ. ಪಾಟೀಲ್​, ಈಶ್ವರ್​ ಖಂಡ್ರೆ, ಶರಣಪ್ರಕಾಶ್​ ಪಾಟೀಲ್​, ಬಸವರಾಜ ರಾಯರೆಡ್ಡಿ ಸೇರಿ ಹಲವು ಪ್ರಮುಖರು ಸಲ್ಲಿಸಿದ ಮನವಿ ಪತ್ರಕ್ಕೆ ಮುಖ್ಯಮಂತ್ರಿಯವರು ತಕ್ಷಣವೇ ಸ್ಪಂದಿಸಿದ್ದಾರೆ.

ಸಮಾಜದಲ್ಲಿ ಶಾಂತಿ ಕದಡುವ ಮತ್ತು ಶರಣ ಪರಂಪರೆಗೆ ಅವಮಾನ ಮಾಡುವ ಇಂತಹ ವಿಕೃತ ಕೃತಿಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಲೇಖಕ ರವಿ ಹಂಜ್​ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್​ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿಯೋಗವು ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳನ್ನು ಒತ್ತಾಯಿಸಿತ್ತು.

ಬಸವಣ್ಣನವರ ಮೇಲೆ ಅಂದಿನ ಜಾತಿವಾದಿಗಳು ಹೊರಿಸಿದ್ದ ಸುಳ್ಳು ಆರೋಪವನ್ನು 'ಕಳ್ಳತನ' ಎಂದು ವ್ಯಾಖ್ಯಾನಿಸಿರುವುದು ಹಾಗೂ ಕಲ್ಯಾಣ ಕ್ರಾಂತಿಯ ಐತಿಹಾಸಿಕ ಸಂಘರ್ಷಗಳನ್ನು ತಿರುಚಿ ಬಸವಣ್ಣನವರ ತಲೆಗೆ ಕಟ್ಟಿರುವುದು ಇತಿಹಾಸಕ್ಕೆ ಬಗೆದ ಘೋರ ಅಪಚಾರವಾಗಿದೆ. ರಾಜ್ಯ ಸರ್ಕಾರ ಬಸವಣ್ಣನವರನ್ನು 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿ, ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಕಡ್ಡಾಯಗೊಳಿಸಿದಾಗಿನಿಂದ ಪಟ್ಟಭದ್ರ ಹಿತಾಸಕ್ತಿಗಳಿಗೆ ತಳಮಳ ಶುರುವಾಗಿದ್ದು, ವಚನ ಸಾಹಿತ್ಯದ ಬಗ್ಗೆ ಅನುಮಾನ ಮೂಡಿಸುವ ಹುನ್ನಾರ ನಡೆದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎಫ್​ಐಆರ್​ ದಾಖಲು: ಬಸವ ಮಂಟಪ ಪುಸ್ತಕದಲ್ಲಿ ಬಸವಣ್ಣನವರನ್ನ ಅವಹೇಳನ ಮಾಡಲಾಗಿದೆ. ಈ ಕೃತಿಯನ್ನು ಮುಟ್ಟುಗೊಲು ಹಾಕಿಕೊಳ್ಳಲು, ರವಿ ಹಂಚ್​, ವಿಶ್ವೇಶ್ವರ ಭಟ್​ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಎಫ್​ಐಆರ್​ ದಾಖಲು ಮಾಡಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್​ ತಿಳಿಸಿದರು.

ಅವಹೇಳನ ಸಹಿಸಲ್ಲ

ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಮಹತ್ವ ಸಾರಿದ ಮಹಾನ್​ ಮಾನವತಾವಾದಿ ಬಸವಣ್ಣನವರ ವ್ಯಕ್ತಿತ್ವದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡುವುದು, ಬರೆಯುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್​ ಎಚ್ಚರಿಕೆ ನೀಡಿದ್ದಾರೆ. ಲೇಖಕ ರವಿ ಹಂಜ್​ ಅವರು ರಚಿಸಿ, ವಿಶ್ವವಾಣಿ ಪ್ರಕಾಶನ ಪ್ರಕಟಿಸಿರುವ "ಬಸವ ಮಂಟಪ' ಕೃತಿ ಬಿಡುಗಡೆಗೂ ಮುನ್ನ ನೀಡಿರುವ ಸಂದರ್ಶನದಲ್ಲಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿಯಲ್ಲಿ ಮಾತನಾಡಿದ್ದಾರೆ.

ಮಹಾನ್​ ಚಿಂತಕರನ್ನು ಅವಹೇಳನ ಮಾಡುವುದು ಅವರ ವಿಚಾರಧಾರೆಗೆ ಧಕ್ಕೆ ತರುವ ಪ್ರಯತ್ನವಾಗಲಿದೆ. ಇಂತಹ ವಿವಾದವುಳ್ಳ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮವರೇ ನಮಗೆ ಮುಳುವಾಗಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಜ್ಯ ಘಟಕದ ಅಧ್ಯಕ್ಷ ಶಂಕರ್​ ಬಿದರಿ, ಕಸಾಪ ಮಾಜಿ ಅಧ್ಯಕ್ಷ ಮನುಬಳಿಗಾರ್​, ಕೊಂಡಿ ಮಂಚಣ್ಣರಂತೆ ನಡೆದುಕೊಂಡಿದ್ದಾರೆ ಎಂದು ಎಂ.ಬಿ.ಪಾಟೀಲ್​ ಅಸಮಾಧಾನ ಹೊರಹಾಕಿದರು. ಬಸವಾಭಿಮಾನಿಗಳು ಬಸವ ಸಮಿತಿ ಆವರಣದಲ್ಲಿ "ಬಸವ ಮಂಟಪ' ಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಡಾ.ಶರಣಪ್ರಕಾಶ್​ ಪಾಟೀಲ್​, ಶಾಸಕ ಬಿ.ಆರ್​.ಪಾಟೀಲ್​, ಲಂಡನ್​ ಮಾಜಿ ಮೇಯರ್​ ನೀರಜ್​ ಪಾಟೀಲ್​ ಇದ್ದರು.

ಅನಿವಾಸಿ ಭಾರತೀಯ ಲೇಖಕ ರವಿ ಹಂಜ್​ ರಚನೆಯ ಬಸವ ಮಂಟಪ ಕೃತಿಯಲ್ಲಿ ಬಸವಣ್ಣನವರ ಕುರಿತು ಮಾಡಿರುವ ಕೆಲವು ವ್ಯಾಖ್ಯಾನಗಳು ಬಸವಣ್ಣನವರ ಅನುಯಾಯಿಗಳಿಗೆ ತೀವ್ರ ನೋವುಂಟುಮಾಡಿದ್ದು, ಇದು ಖಂಡನೀಯ.
ಡಾ.ಸಿ.ಸೋಮಶೇಖರ್​ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ

ಸಭೆ ವಿರುದ್ಧ ಪೊಲೀಸರಿಗೆ ದೂರು ನ.15ರಂದು ನಡೆದ ಬಸವ ಮಂಟಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಡಲಾದ ಭಾಷಣಗಳು ಹಾಗೂ ಪ್ರಸಾರವಾದ ವಿಡಿಯೋಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹೈಗ್ರೌಂಡ್ಸ್​ ಪೊಲೀಸ್​ ಠಾಣೆಗೆ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ದೂರು ಸಲ್ಲಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಷಣಕಾರರ ಹೇಳಿಕೆಗಳು, ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳು ಹಾಗೂ ಇತರ ದೃಶ್ಯ&ಶ್ರವ್ಯ ದಾಖಲೆಗಳ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ. ಅಲ್ಲದೆ, ಕಾರ್ಯಕ್ರಮದ ವಿಡಿಯೋಗಳು ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಅವುಗಳಲ್ಲಿನ ಹೇಳಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.