ಯಾದಗಿರಿ ನಗರಸಭೆಯಲ್ಲಿ ಕರೆದಿದ್ದ ಸಭೆಯಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಮಾತನಾಡಿದರು. ಪೌರಾಯುಕ್ತ ಉಮೇಶ ಚವ್ಹಾಣ್​, ವ್ಯವಸ್ಥಾಪಕಿ ಅಶ್ವಿನಿ, ಸಮಿತಿ ಸದಸ್ಯೆ ಆರತಿ ಜಾಕಾ ಇತರರಿದ್ದರು. 
ರಾಜ್ಯ

ಮುದ್ರಾಂಕ ಮೌಲ್ಯದ ಮೇಲೆ ಶೇ.5 ಶುಲ್ಕ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ನೇತೃತ್ವದ ಸಭೆಯಲ್ಲಿ ರ್ನಿಣಯ
  • 2-3 ಕಂತುಗಳಲ್ಲಿ ಪಾವತಿಗೆ ಅವಕಾಶ
ಯಾದಗಿರಿ: ನಗರಸಭೆ ವ್ಯಾಪ್ತಿಯ ಆಶ್ರಯ ಬಡಾವಣೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡುವ ನಿವೇಶನಗಳ ನೋಂದಣಿ ಮತ್ತು ಮುದ್ರಾಂಕ ಮೌಲ್ಯದ ಮೇಲೆ ಶೇ.5 ಶುಲ್ಕ ವಿಧಿಸಲು ಇಲ್ಲಿನ ನಗರಸಭೆಯಲ್ಲಿ ಶನಿವಾರ ನಡೆದ ನಗರ ಆಶ್ರಯ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ನೇತೃತ್ವದಲ್ಲಿ ರ್ನಿಣಯ ಕೈಗೊಳ್ಳಲಾಗಿದೆ.
ಸ್ವಂತ ಮನೆ ಹೊಂದುವ ಬಡವರಿಗೆ ನಿವೇಶನ ಒದಗಿಸಲು ದಶಕಗಳ ಹಿಂದೆ ನಿರ್ಮಿಸಲಾದ ಆಶ್ರಯ ಬಡಾವಣೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಹಂಚಿಕೆಯಾಗುವ ನಿವೇಶನಗಳ ಮೇಲೆ ಶೇ.2.5 ಹಾಗೂ ಸಾಮಾನ್ಯ ನಿವೇಶನಗಳ ಶೇ.5 ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಯಿತು.
ದಶಕಗಳ ಹಿಂದೆ ಅಭಿವೃದ್ಧಿಪಡಿಸಲಾದ ಆಶ್ರಯ ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಕುಡಿವ ನೀರಿನ ಕೊಳವೆ, ಬೀದಿ ದೀಪಗಳಂತಹ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕಿದೆ. ಆಶ್ರಯ ನಿವೇಶನಗಳ ಮೇಲೆ ಗರಿಷ್ಠ ಶೇ.10 ಶುಲ್ಕು ವಿಧಿಸಿ, ಆ ಹಣವನ್ನು ಬಡಾವಣೆಗಳಿಗಾಗಿ ಬಳಸಿಕೊಳ್ಳುವ ಅವಕಾಶವಿದೆ ಎಂದು ಪೌರಾಯುಕ್ತ ಉಮೇಶ ಚವ್ಹಾಣ್​ ಪ್ರಸ್ತಾಪಿಸಿದರು.
ನೋಂದಣಿ ಮತ್ತು ಮುದ್ರಾಂಕ ಮೌಲ್ಯದಡಿ ಒಂದು ನಿವೇಶನಕ್ಕೆ ಸುಮಾರು 10 ರೂ. ಲವಾದರೆ, ಶೇ.50ರಂತೆ 50 ಸಾವಿರ ರೂ. ಶುಲ್ಕ ವಿಧಿಸಬಹುದು. ಈ ಹಣವನ್ನು ಒಂದೇ ಬಾರಿಗೆ ಪಾವತಿಸಿಲು ಫಲಾನುಭವಿಗಳಿಗೆ ಹೊರೆಯಾಗಬಹುದು. ಹೀಗಾಗಿ, 2&3 ಕಂತುಗಳಲ್ಲಿ ಪಾವತಿಸುವ ಅವಕಾಶ ನೀಡಬಹುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ, ಆಶ್ರಯ ಯೋಜನೆಯಡಿ ಅರ್ಜಿ ಹಾಕುವ ಬಹುತೇಕರು ಬಡವರಿದ್ದಾರೆ. ನಿವೇಶನ ಶುಲ್ಕ ಅವರಿಗೆ ಆರ್ಥಿಕವಾಗಿ ಹೊರೆಯಾಗಬಾರದು. ಸಂಗ್ರಹವಾಗುವ ಹಣವನ್ನು ಬಡಾವಣೆಗಳ ಅಭಿವೃದ್ಧಿಗಾಗಿ ವಿನಿಯೋಗ ಮಾಡಬೇಕು. ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ 5 ಶುಲ್ಕ ಹೊರೆಯಾಗುತ್ತದೆ. ಹೀಗಾಗಿ, ಅವರಿಗೆ ವಿನಾಯಿತಿ ಕೊಟ್ಟು ಶೇ.2.5 ವಿಧಿಸಬೇಕು ಎಂದು ಸೂಚಿಸಿದರು ಇದಕ್ಕೆ ಸದಸ್ಯರೂ ಸಮ್ಮತಿಸಿದರು. ಲಿಂಗತ್ವ ಅಲ್ಪಸಂಖ್ಯಾತರಿಗೆ 9 ನಿವೇಶನಗಳನ್ನು ಹಂಚಿಕೆ ಮಾಡಬೇಕು. ಹಕ್ಕುಪತ್ರ ಹಸ್ತಾಂತರ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಹೇಳಿದರು. ಸಭೆಯಲ್ಲಿ ನಗರಸಭೆಯ ವ್ಯವಸ್ಥಾಪಕಿ ಅಶ್ವಿನಿ, ಸಮಿತಿ ಸದಸ್ಯರಾದ ಆರತಿ ಅಂಬರೀಶ ಜಾಕಾ ಇಮುನವೆಲ್​ ಕ್ರಿಷ್ಟಫರ್​ ಇತರರಿದ್ದರು.
ಸರಿಯಾದ ದಾಖಲೆಗಳು ನೀಡಿ
ಸಮಿತಿ ಸಭೆಗೆ ಬರುವ ಸದಸ್ಯರಿಗೆ ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಯನ್ನು ಸರಿಯಾಗಿ ನೀಡಬೇಕು. ಹೊಸಳ್ಳಿ ರಸ್ತೆಯ ಬಡಾವಣೆಯಲ್ಲಿನ ನಿವೇಶನಗಳ ಸಂಖ್ಯೆಯನ್ನು ಬಿಳಿ ಹಾಳೆಯಲ್ಲಿ ಬರೆದು ಕೊಟ್ಟಿದ್ದಾರೆ. ಬಡಾವಣೆಯ ಸರ್ವೇ ನಂಬರ್​, ನೆ, ಖಾಲಿ ಇರುವ ನಿವೇಶನಗಳ ಚಿತ್ರಗಳು ಇಲ್ಲ ಎಂದು ಸಮಿತಿ ಸದಸ್ಯ ಪ್ರಭಾಕರ ಜಿ.ಸಾಯಬಣ್ಣ ಆರೋಪಿಸಿದರು.
100 ಎಕರೆ ಭೂಮಿಗಾಗಿ ಪತ್ರ ಬರೆಯಿರಿ
ಆಶ್ರಯ ಯೋಜನೆಯಡಿ ನಿವೇಶನಗಳು ಕೋರಿ 1,873 ಅರ್ಜಿ ಬಂದಿದ್ದು, ಅಷ್ಟೊಂದು ಅರ್ಜಿಗಳಿಗೆ ನಿವೇಶನಗ ಒದಗಿಸಲು ನಗರಸಭೆಯಲ್ಲಿ ಸರ್ಕಾರಿ ಭೂಮಿ ಇಲ್ಲ. ಹೀಗಾಗಿ, ಅರ್ಜಿದಾರರಿಗೆ ಅಗತ್ಯವಿರುವ ಸುಮಾರು 100 ಎಕರೆ ಭೂಮಿ ಖರೀದಿಗೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಪೌರಾಯುಕ್ತರಿಗೆ ಸೂಚಿಸಿದರು. ಈಗಾಗಲೇ ಅಭಿವೃದ್ಧಿಪಡಿಸಿ ಹಂಚಿಕೆಯಾಗದೆ ಉಳಿದಿರುವ ನಿವೇಶನಗಳನ್ನು ಪತ್ತೆ ಮಾಡಬೇಕು. ಜತೆಗೆ ಉಳಿದ ಅರ್ಜಿಗೆ ಬೇಕಾದಷ್ಟು ಜಾಗವನ್ನು ನೋಂದಣಿ ಮತ್ತು ಮುದ್ರಾಂಕ ಮೌಲ್ಯ ಲೆಕ್ಕ ಹಾಕಿ ಭೂಮಿ ಖರೀದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದರು.