ಟ್ರಾನ್ಸ್ ಫ್ಯಾಟ್ ಮುಕ್ತ (ಕೃತಕ ಕೊಬ್ಬಿನಾಂಶ) ಕರ್ನಾಟಕ ಕಾರ್ಯಕ್ರಮ 
ರಾಜ್ಯ

ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಿಂದ 45.87 ಲಕ್ಷ ಲೀಟರ್ ಮರುಬಳಕೆ ಎಣ್ಣೆ ಸಂಗ್ರಹ

ಪ್ರಮುಖ ಮುಖ್ಯಾಂಶಗಳು

  • * ಆಹಾರ ಹಾಗೂ ಕೈಗಾರಿಕೋದ್ಯಮಿಗಳಿಗೆ 28.91 ಲಕ್ಷ ದಂಡ
  • * ಟ್ರಾನ್ಸ್ ಫ್ಯಾಟ್‌ನಿಂದ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ
ಬೆಂಗಳೂರು: ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಡೆಯಲು ಕ್ರಮವಹಿಸಿರುವ ಆಹಾರ ಸುರಕ್ಷತಾ ಇಲಾಖೆಯು, ಕಳೆದ ಎರಡು ವರ್ಷಗಳಲ್ಲಿ ಈ ಮಾದರಿಯ 45.87 ಲಕ್ಷ ಲೀಟರ್ ಎಣ್ಣೆಯನ್ನು ಸಂಗ್ರಹಿಸಿದೆ.
ಇಲಾಖೆಯು ನಗರದಲ್ಲಿ ಹಮ್ಮಿಕೊಂಡಿದ್ದ ಟ್ರಾನ್ಸ್ ಫ್ಯಾಟ್ ಮುಕ್ತ (ಕೃತಕ ಕೊಬ್ಬಿನಾಂಶ) ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಅವರು ಈ ವಿಷಯ ತಿಳಿಸಿದರು. 2024ರಿಂದ 2026ರ ಅವಧಿಯಲ್ಲಿ ಇಷ್ಟು ಬೃಹತ್ ಪ್ರಮಾಣದ ಎಣ್ಣೆಯನ್ನು ಸಂಗ್ರಹಿಸಲಾಗಿದೆ ಎಂದರು.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಆಹಾರದಲ್ಲಿ ಮರುಬಳಕೆ ಮಾಡದಂತೆ ತಡೆಯಲಾಗುತ್ತಿದೆ. ಆ ಎಣ್ಣೆಯನ್ನು ಜೈವಿಕ ಇಂಧನವಾಗಿ ಪರಿವರ್ತಿಸುವ ಉದ್ದೇಶದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಾರ್ಯಕ್ರಮ ರೂಪಿಸಿದೆ ಎಂದು ತಿಳಿಸಿದರು.

28.91 ಲಕ್ಷ ರೂ. ದಂಡ:

ಬಳಕೆ ಮಾಡಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ದಂಡ ಸೇರಿ ಇತರೆ ಕ್ರಮಮಗಳನ್ನು ಕೈಗೊಳ್ಳಲಾಗಿದೆ. 2024-26ರ ಅವಧಿಯಲ್ಲಿ ಬಳಕೆ ಮಾಡಿದ ಅಡುಗೆ ಎಣ್ಣೆಯ ಮರುಬಳಕೆ ಮಾಡಿದ ಆಹಾರ ಹಾಗೂ ಕೈಗಾರಿಕೋದ್ಯಮಿಗಳಿಗೆ 28.91 ಲಕ್ಷ ದಂಡ ವಿಧಿಸಲಾಗಿದೆ ಎಂದು ಹೇಳಿದರು.

ಟ್ರಾನ್ಸ್ ಫ್ಯಾಟ್ ನಿಂದ ಆರೋಗ್ಯಕ್ಕೆ ಅಪಾಯ:

ಕೈಗಾರಿಕೆಯಲ್ಲಿ ಉತ್ಪಾದಿಸಲ್ಪಡುವ ಟ್ರಾನ್ಸ್ ಫ್ಯಾಟ್‌ಗಳು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ಅಪಾಯಕಾರಿ ಅಂಶಗಳನ್ನು ಒಳಗೊಂಡಿರುತ್ತವೆ. ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಸ್ಥೂಲಕಾಯ, ಚಯಾಪಚಯ ಸಂಬಂಧಿತ ಅಸ್ವಸ್ಥತೆಗಳು ಹಾಗೂ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ. ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಸುಮಾರು 2.78 ಲಕ್ಷಕ್ಕೂ ಹೆಚ್ಚು ಸಾವುಗಳು ಕೈಗಾರಿಕೆಗಳಲ್ಲಿ ಉತ್ಪಾದಿಸಲ್ಪಡುವ ಟ್ರಾನ್ಸ್ ಫ್ಯಾಟ್‌ಗಳ ಸೇವನೆಯೊಂದಿಗೆ ಸಂಬಂಧ ಹೊಂದಿದ್ದು, ವಿಶ್ವ ಆರೋಗ್ಯ ಸಂಸ್ಥೆ ಇವುಗಳ ಜಾಗತಿಕ ನಿರ್ಮೂಲನೆಗೆ ಕರೆ ನೀಡಿದೆ ಎಂದರು.
ಕೃತಕ ಕೊಬ್ಬು ನಿರ್ವಹಣೆಗೆ ರಾಜ್ಯದಲ್ಲಿ ಪ್ರಯೋಗಾಲಯ ಪರೀಕ್ಷೆ, ತಪಾಸಣೆ ಸೇರಿ ವಿವಿಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾಜ್ಯದಾದ್ಯಂತ ಈಗಾಗಲೇ 52 ಸಾವಿರಕ್ಕೂ ಅಧಿಕ ಆಹಾರೋದ್ಯಮ ವೃತ್ತಿಪರರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್, ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಪಿ.ಸಿ. ರಾವ್, ಕೈಗಾರಿಕೋದ್ಯಮಿಗಳು ಹಾಗೂ ಆಹಾರ ಉದ್ಯಮ ನಿರ್ವಾಹಕರು ಪಾಲ್ಗೊಂಡಿದ್ದರು.