SIT  
ರಾಜ್ಯ

ಜ್ಞಾನೇಂದ್ರ, ಕನ್ನಾಳೆ ವಿರುದ್ಧ 4,087 ಪುಟಗಳ ಚಾರ್ಜ್‌ಶೀಟ್

ಸಾಹುಕಾರ್, ಗೀತಾ ಸೇರಿ ಇತರರ ಬಗ್ಗೆ ಮುಂದುವರೆದ ತನಿಖೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿ ಹಗರಣದ ತನಿಖೆ ನಡಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ ಕನ್ನಾಳೆ ವಿರುದ್ಧ 4,087 ಪುಟಗಳ ಆರೋಪಪಟ್ಟಿ ಕೋರ್ಟ್‌ಗೆ ಸಲ್ಲಿಸಿದೆ.

ಪ್ರಾಥಮಿಕ ದೋಷಾರೋಪ ಪಟ್ಟಿಯಲ್ಲಿ ಇಬ್ಬರು ಆರೋಪಿಗಳ ನಡುವೆ ನಡೆದ ಕೋಟ್ಯಾಂತರ ರೂ. ಹಣಕಾಸು ವ್ಯವಹಾರ ಮತ್ತು ಪರೀಕ್ಷಾ ಅಭ್ಯರ್ಥಿಗಳ ಬ್ಯಾಂಕ್ ಖಾತೆಗಳಿಗೆ ಪ್ರತ್ಯೇಕವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಹಾಗೂ ಆ ಹಣದಿಂದ ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಸಿಗೆ ಕೊಡಿಸಿದ್ದ ಚಿನ್ನಾಭರಣ, ಉತ್ತರ ಪ್ರದೇಶದಲ್ಲಿರುವ ಆಸ್ತಿ ಖರೀದಿ ಸೇರಿ ಹಲವು ಅಂಶಗಳನ್ನು ಉಲ್ಲೇಖಿಸಿ ನಗರದ 23ನೇ ಸಿಸಿಹೆಚ್ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

40 ಮಂದಿ ಹೇಳಿಕೆ:

ಜ್ಞಾನೇಂದ್ರ ಕುಮಾರ್ ಕೆಪಿಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ತನ್ನ ಬಳಿ ಇದ್ದ ಟ್ಯಾಬ್‌ನಿಂದ ಫೋಟೋ ತೆಗೆದು ಪೆನ್‌ಡ್ರೈವ್‌ನಲ್ಲಿ ಹಾಕಿಕೊಂಡು ನಂತರ ಅದನ್ನು ಬಸವರಾಜ ಕನ್ನಾಳೆಗೆ ನೀಡಿರುವುದು. ನಂತರ ಕೃತ್ಯಕ್ಕೆ ಬಳಸಿದ್ದ ಟ್ಯಾಬ್ ಮತ್ತು ಫೋನ್ ಅನ್ನು ನಾಶಪಡಿಸಿರುವುದು, ದೇವನಹಳ್ಳಿಯ ರೆಸಾರ್ಟ್‌ವೊಂದರಲ್ಲಿ ಅಭ್ಯರ್ಥಿಗಳಿಗೆ ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳನ್ನು ನೀಡಿರುವುದು ಮತ್ತು ಪಶುವೈದ್ಯಾಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 9 ಅಭ್ಯರ್ಥಿಗಳು ಮತ್ತು ಅವರ ಸಂಬಂಧಿಕರಾದ ಸುಮಾರು 40 ಮಂದಿಯ ಸಾಕ್ಷಿಗಳ ಹೇಳಿಕೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಒಬೊಬ್ಬ ಅಭ್ಯರ್ಥಿಗಳಿಂದ 40 ಲಕ್ಷದಿಂದ 80 ಲಕ್ಷ ರೂ.ವರೆಗೆ ಹಣ ವಸೂಲಿ ಮಾಡಿರುವ ಬಗ್ಗೆ, ಅಂದಾಜು 15 ಅಭ್ಯರ್ಥಿಗಳ ಜತೆ ಡೀಲ್ ನಡೆಸಿರುವ ವಿಚಾರ, ಜ್ಞಾನೇಂದ್ರ ಕುಮಾರ್ ಬಳಿ ಮುಟ್ಟುಗೋಲು ಹಾಕಿಕೊಂಡಿರುವ ಚಿನ್ನಾಭರಣ ಸೇರಿ ಇತರೆ ಮಾಹಿತಿಯನ್ನು ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಿದೆ.

ಪಶುವೈದ್ಯಾಧಿಕಾರಿ ಪರೀಕ್ಷಾ ಅಕ್ರಮ ಸಂಬಂಧ ಅಭ್ಯರ್ಥಿಯೊಬ್ಬರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಇದೇ ವೇಳೆ ಕಾಂತಕುಮಾರ್ ಎಂಬುವರು ಅದಕ್ಕೆ ನಡೆದ ಲಕ್ಷಾಂತರ ರೂ. ವ್ಯವಹಾರದ ಕುರಿತು ಮತ್ತೊಂದು ಪ್ರಕರಣ ದಾಖಲಿಸಿದ್ದರು. ಹೀಗೆ ವಿಧಾನಸೌಧ ಠಾಣೆಯಲ್ಲಿ ಜೂನ್ ತಿಂಗಳಿಂದ ಆಗಸ್ಟ್ ತಿಂಗಳವರೆಗೆ ಪ್ರತ್ಯೇಕ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಬಳಿಕ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಇದೇ ಇ.ಡಿ ಅಧಿಕಾರಿಗಳು ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಇದೀಗ ಎಸ್‌ಐಟಿ ಅಧಿಕಾರಿಗಳು ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆ ಬಳಿಕ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಸದಸ್ಯೆ ಬಿ.ವಿ.ಗೀತಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಅವರ ವಿರುದ್ಧವೂ ಆರೋಪಪಟ್ಟಿ ಸಲ್ಲಿಸಲಿದ್ದಾರೆ.

ಮೂರೇ ವಾರದಲ್ಲಿ ಚಾರ್ಜ್‌ಶೀಟ್!

ಹೈಕೋರ್ಟ್ ಸೂಚನೆ ಮೇರೆಗೆ ರಾಜ್ಯ ಸರ್ಕಾರ ನ.2ರಂದು ಹಿರಿಯ ಐಪಿಎಸ್ ಅಧಿಕಾರಿ ಆರ್.ಹಿತೇಂದ್ರ ನೇತೃತ್ವದಲ್ಲಿ ಎಸ್‌ಐಟಿ ರಚನೆ ಮಾಡಿದ್ದರು. ಎಸ್‌ಐಟಿ ತಂಡ ನ.4ರಿಂದ ತನಿಖೆ ಆರಂಭಿಸಿತ್ತು. ಆದರೆ, ಮೂರು ವಾರದಲ್ಲಿ ನಡೆಸಿದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಅಲ್ಲದೇ ಆಯೋಗದ ಭ್ರಷ್ಟಾಚಾರ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಷ್ಟೇ ಅಲ್ಲದೇ ಈ ಹಿಂದೆ ನಡೆದ ಗೆಜೆಟ್ ಪ್ರೊಬೇಷನರಿ, ಕೃಷಿ ಇಲಾಖೆ, ಆರ್‌ಟಿಒ ಬ್ರೇಕ್ ಇನ್‌ಸ್ಪೆಕ್ಟರ್, ಜನಸಂಪನ್ಮೂಲ, ಕೈಗಾರಿಕಾ ವಿಸ್ತರಣಾದಿಕಾರಿಗಳು, ಆರ್‌ಡಿಪಿಆರ್ ಇಲಾಖೆಯಲ್ಲಿ ಇಂಜಿನಿಯರ್‌ಗಳ ನೇಮಕ ಸೇರಿ ಹಲವು ನೇಮಕಾತಿಯಲ್ಲಿ ಭ್ರಷ್ಟಾಚಾರ, ಲಂಚ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಆರೋಪಗಳು ಇವೆ. ಎಸ್‌ಐಟಿ 3 ವಾರದಲ್ಲಿ ತನಿಖೆ ನಡೆಸಿ ಮೊದಲ ಹಂತದ ಚಾರ್ಜ್‌ಶೀಟ್ ಸಲ್ಲಿಸಿದೆ. ಉಳಿದಂತೆ ಇನ್ನೂ ಹಲವು ಅಕ್ರಮಗಳ ಬಗ್ಗೆ ತನಿಖೆ ಮುಂದುವರೆಸಿದೆ.