ರಾಜ್ಯದ 368 ನ್ಯಾಯಾಧೀಶರ ವರ್ಗಾವಣೆ 
ರಾಜ್ಯ

ರಾಜ್ಯದ 368 ನ್ಯಾಯಾಧೀಶರ ವರ್ಗಾವಣೆ! ವಿನಯ್ ಕುಲಕರ್ಣಿ ದೋಷಿ ಆದೇಶಿಸಿದ ಜಡ್ಜ್ ಕೂಡ ಟ್ರಾನ್ಸ್​ಫರ್​

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ 368 ನ್ಯಾಯಾಧೀಶರ ವರ್ಗಾವಣೆ
  • ವಿನಯ್​ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದ್ದ ನ್ಯಾಯಾಧೀಶರು ಕೂಡ ವರ್ಗ
  • ಆಡಳಿತಾತ್ಮಕ ಕಾರಣಕ್ಕೆ ಹೈಕೋರ್ಟ್​ ಆದೇಶ
  • ಜೂ.01ರಿಂದ ಜಾರಿ
ಬೆಂಗಳೂರು: ಆಡಳಿತಾತ್ಮಕ ಉದ್ದೇಶಗಳಿಗಾಗಿ ರಾಜ್ಯದ್ಯಂತ 368 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಎಂದು ಹೈಕೋರ್ಟ್​ ಗುರುವಾರ (ಏ.16) ಆದೇಶ ಹೊರಡಿಸಿದೆ. ಈ ವರ್ಗಾವಣೆ ಪಟ್ಟಿಯಲ್ಲಿ 114 ಜಿಲ್ಲಾ ನ್ಯಾಯಾಧೀಶರು, 139 ಸಿವಿಲ್​ ನ್ಯಾಯಾಧೀಶರು ಮತ್ತು 115 ಹಿರಿಯ ಸಿವಿಲ್​ ನ್ಯಾಯಾಧೀಶರು ಸೇರಿದ್ದು, ವಿನಯ್​ ಕುಲಕರ್ಣಿ ದೋಷಿ ಎಂದು ತೀರ್ಪು ನೀಡಿದ್ದ ಗಜಾನನ ಭಟ್​ ಕೂಡ ವರ್ಗಾವಣೆ ಆಗಿರುವುದು ಗಮನಾರ್ಹ. 
ಈ ಆದೇಶವು ಜೂ. 1ರಿಂದ ಜಾರಿಗೆ ಬರಲಿದೆ. ಹೈಕೋರ್ಟ್​ನ ಹಾಲಿ ರಿಜಿಸ್ಟ್ರಾರ್​ ಜನರಲ್​ ಕೆ.ಎಸ್​. ಭರತ್​ ಕುಮಾರ್​ ಅವರನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್​ ಮತ್ತು ಸೆಷನ್ಸ್​ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಅಲ್ಲಿ ನ್ಯಾಯಾಧೀಶರಾಗಿದ್ದ ಎಂ. ಚಂದ್ರಶೇಖರ್​ ರೆಡ್ಡಿ ಅವರನ್ನು ರಿಜಿಸ್ಟ್ರಾರ್​ ಜನರಲ್​ ಸ್ಥಾನಕ್ಕೆ ವರ್ಗಾಯಿಸಲಾಗಿದೆ. 
ಇನ್ನು ಬಿಜೆಪಿಯ ಯೋಗೇಶ್​ ಗೌಡ ಕೊಲೆ ಪ್ರಕರಣದಲ್ಲಿ ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್​ ಗಜಾನನ ಭಟ್​ ಅವರನ್ನು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಅವರಿಂದ ತೆರವಾಗಿರುವ ಸ್ಥಾನಕ್ಕೆ ಕೆ.ಬಿ ಶಿವಪ್ರಸಾದ್​ ಅವರನ್ನು ನೇಮಿಸಲಾಗಿದೆ. ವರ್ಗಾವಣೆಯೂ ಜೂ. 1ರಿಂದ ಜಾರಿಯಾಗುವುದರಿಂದ ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲು ಯಾವುದೇ ಸಮಸ್ಯೆಯಿರುವುದಿಲ್ಲ ಎಂದು ತಿಳಿಸಲಾಗಿದೆ.