railway-station-hotels-inspection
- * ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
- * ಆಹಾರ ತಯಾರಿಕೆಯಲ್ಲಿ ಕೃತಕ ಬಣ್ಣ, ಪ್ಲಾಸ್ಟಿಕ್ ಬಳಕೆ
ಆಹಾರದಲ್ಲಿ ಕೃತಕ ಬಣ್ಣ ಹಾಗೂ ಅಡುಗೆ ತಯಾರಿಕೆಯಲ್ಲಿ ಪ್ಲಾಸ್ಟಿಕ್‌ಶೀಟ್ ಬಳಕೆಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿ ವರ್ಷವೇ ಕಳೆದಿದ್ದರೂ ಇನ್ನೂ ಬಳಕೆಯಲ್ಲಿವೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ವಿಭಾಗವು ರಾಜ್ಯಾದ್ಯಂತ ರೈಲು ನಿಲ್ದಾಣಗಳ ಹೋಟೆಲ್, ಕ್ಯಾಂಟೀನ್ ಹಾಗೂ ಇತರೆ ಆಹಾರ ಉದ್ದಿಮೆಗಳ ಮೇಲೆ ನಡೆಸಿದ ದಾಳಿ ವೇಳೆ ಈ ಅಂಶ ಬೆಳಕಿಗೆ ಬಂದಿದೆ.
ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದು, ಬೆಂಗಳೂರು, ಯಶವಂತಪುರ, ಕೆ.ಆರ್.ಪುರ, ಯಲಹಂಕ, ಕೋಲಾರ, ಮೈಸೂರು, ಕಾರವಾರ, ಹುಬ್ಬಳ್ಳಿ, ಬಳ್ಳಾರಿ, ಉಡುಪಿ, ಕೊಪ್ಪಳ, ಮಂಗಳೂರು, ದಾವಣಗೆರೆ ಸೇರಿ ರಾಜ್ಯಾದ್ಯಂತ ಪ್ರಮುಖ 36 ರೈಲು ನಿಲ್ದಾಣಗಳ ಆವರಣದಲ್ಲಿರುವ ಹೋಟೆಲ್, ಕ್ಯಾಂಟೀನ್, ಆಹಾರ ಮಳಿಗೆಗಳು, ಪ್ಯಾಂಟ್ರಿ ಕಾರ್‌ಗಳು, ಆಹಾರ ತಯಾರಿಕಾ ಘಟಕಗಳು ಸೇರಿ 112 ಆಹಾರ ಉದ್ದಿಮೆಗಳ ಮೇಲೆ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಜಿಲೇಬಿಯಲ್ಲಿ ಹಳದಿ ಬಣ್ಣ ಹಾಗೂ ಖೋವಾ ಪೇಡಾದಲ್ಲಿ ಗುಲಾಬಿ ಬಣ್ಣ ಬಳಸಿರುವುದು ಕಂಡುಬಂದಿದೆ. ಮೈಸೂರಿನ ರೈಲು ನಿಲ್ದಾಣದಲ್ಲಿನ ಆಹಾರ ಘಟಕಗಳಲ್ಲಿ ನಿಷೇಧಿತ ಪ್ಲಾಸ್ಟಿಕ್‌ಶೀಟ್ ಬಳಸಿ ಇಡ್ಲಿ ಬೇಯಿಸುತ್ತಿರುವುದು, ಲೇಬಲಿಂಗ್ ವಿವರಗಳಿಲ್ಲದ ಚಪಾತಿ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಹಾವೇರಿ ರೈಲು ನಿಲ್ದಾಣದ ಮಳಿಗೆಗಳಲ್ಲಿ ಅವಧಿ ಮೀರಿದ ನಂದಿನಿ ಮೊಸರು ಹಾಗೂ ಡೋಡ್ಲಾ ಸ್ಟಾೃಂಡರ್ಡೈಸ್ಡ್ ಹಾಲಿನ ಪ್ಯಾಕೆಟ್‌ಗಳು ದೊರೆತಿವೆ. ಕೆ.ಆರ್.ಪುರ ರೈಲು ನಿಲ್ದಾಣದ ಹೋಟೆಲ್‌ನ ಆಹಾರ ತಯಾರಿಕೆ ಸ್ಥಳದಲ್ಲಿ ಶುಚಿತ್ವ ಇಲ್ಲದಿರುವುದು ಕಂಡುಬಂದಿದೆ.
ಇದೇ ರೀತಿ ಇತರೆ ನಿಲ್ದಾಣಗಳಲ್ಲಿನ ಹೋಟೆಲ್, ಕ್ಯಾಂಟೀನ್‌ಗಳಲ್ಲಿ ಸಮೋಸಾಗಳನ್ನು ಕಾರ್ಡ್‌ಬೋರ್ಡ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟಿರುವುದು, ತಯಾರಿಸಿದ ವಡೆಗಳನ್ನು ವಾರ್ತಾ ಪತ್ರಿಕೆಗಳಲ್ಲಿ ಸುತ್ತಿಕೊಡುವುದು, ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಚಟ್ನಿ ಹಾಗೂ ಆಹಾರ ಪದಾರ್ಥಗಳ ಸಂಗ್ರಹಣೆ, ಲೇಬಲಿಂಗ್ ವಿವರಗಳಿಲ್ಲದ ಖಾರದ ಪದಾರ್ಥಗಳ ಪ್ಯಾಕೆಟ್‌ಗಳನ್ನು ಪತ್ತೆ ಮಾಡಲಾಗಿದೆ. ಇದಲ್ಲದೆ ಈರುಳ್ಳಿ ಹಾಗೂ ಇತರೆ ತರಕಾರಿಗಳಲ್ಲಿ ಶಿಲೀಂಧ್ರ ಬೆಳವಣಿಗೆ, ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಮಾಡುತ್ತಿರುವುದು ಹಾಗೂ ಆಹಾರ ಉದ್ದಿಮೆಯ ನೋಂದಣಿ ಪ್ರಮಾಣಪತ್ರವನ್ನು ಪ್ರಮುಖ ಸ್ಥಗಳಲ್ಲಿ ಪ್ರದರ್ಶಿಸದಿರುವುದು ಬೆಳಕಿಗೆ ಬಂದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು-ಕೇರಳ-ಮತ್ತು ಹುಬ್ಬಳ್ಳಿ-ಬೆಂಗಳೂರು ನಡುವಿನ ಸೇವ ಒದಗಿಸುವ ವಂದೇ ಭಾರತ್ ರೈಲಿನಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವ ಮೂಲಕ ಉತ್ತಮ ಸೇವೆ ನೀಡುತ್ತಿದೆ. ಹುಬ್ಬಳಿಯ ವಂದೇ ಭಾರತ್ ಬೇಸ್ (ಕ್ಲಸ್ಟರ್) ಕಿಚನ್ ಅಚ್ಚುಕಟ್ಟಾಗಿದ್ದು, ಶುಚಿತ್ವದಿಂದ ಕೂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಅಲೆಯೂರು, ಕೆಮ್ತೂರು ಹಾಗೂ ದುಗ್ಲಿಪದವು ಸೇರಿ ಕೆಲ ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಉಡುಪಿ ಜಿಲ್ಲೆ ಅಂಕಿತಾಧಿಕಾರಿ ರಶ್ಮಿ ನೇತೃತ್ವದಲ್ಲಿ ಬಾಳೆಹಣ್ಣಿನ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಬಾಳೆಕಾಯಿ ಗೊನೆಗೆ ಇಂಡೊಥ್ರೆಲ್ ಕಂಪನಿಯ ಎಥಿಾನ್ ಸೇರಿ ಇತರೆ ರಾಸಾಯನಿಕ ಬಳಸಿ ಹಣ್ಣು ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಒಟ್ಟು 10,890 ಕೆ.ಜಿ. (ಅಂದಾಜು 8,71,200 ರೂ.) ರಾಸಾಯನಿಕ ಬಳಸಿದ್ದ ಬಾಳೆಕಾಯಿಯನ್ನು ಜಪ್ತಿ ಮಾಡಲಾಗಿದೆ. ಅವೆಲ್ಲವನ್ನು ಗೋಡೌನ್‌ನಲ್ಲಿ ಇರಿಸಿ ಸೀಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ ಲೋಪಗಳು ಕಂಡುಬಂದಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಸಿದ ಆಹಾರ ಉದ್ದಿಮೆದಾರರಿಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
— ಕೆ. ಶ್ರೀನಿವಾಸ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಆಯುಕ್ತ