ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ, ತೇವಾಂಶ ಭರಿತ ಮೋಡದ ಕಾರಣ ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಶುಕ್ರವಾರ ಮಳೆಯಾಯಿತು. ಕರಾವಳಿ ವ್ಯಾಪ್ತಿಯ ಪ್ರದೇಶಗಳಲ್ಲಿ ತುಸು ಬಿರುಸಾಗಿ ಸುರಿದಿತ್ತು.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ,ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನದಲ್ಲಿ ಮುಂದಿನ 3 ದಿನ ಜೋರು ಮಳೆಯಾಗಲಿದೆ. ಬೆಂಗಳೂರು ನಗರ. ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಬಾಗಲಕೋಟೆ ಮತ್ತು ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೂ 13ರಿಂದ ಜೂ 15ವರೆಗೆ ಲಘು ಪ್ರಮಾಣದಲ್ಲಿ ಮಳೆ ಸುರಿಯಲಿದೆ.
ರಾಜ್ಯದಲ್ಲಿ ಸದ್ಯ ಮಾನ್ಸೂನ್ ದುರ್ಬಲವಾಗಿದೆ. ಆದರೆ, ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮತ್ತು ತೇವಾಂಶ ಭರಿತ ಮೋಡಗಳು ರಾಜ್ಯದಲ್ಲಿ ಹಾದುಹೋಗಿರುವ ಕಾರಣ ಮಳೆಯಾಗುತ್ತಿದೆ. ಆದರೆ, ಅಷ್ಟೊಂದು ರಭಸವಾಗಿ ಬೀಳುವುದಿಲ್ಲ. ಜೂ 1ರಿಂದ ಜೂ 12ವರೆಗಿನ ಅವಧಿಯಲ್ಲಿ ಮಳೆ ಕೊರತೆಯಾಗಿದ್ದು,ಮುಖ್ಯವಾಗಿ ಕರಾವಳಿ,ಮಲೆನಾಡು ಭೌಗೋಳಿಕ ಪ್ರದೇಶಗಲ್ಲಿ ಮಳೆ ಅಭಾವಾಗಿದೆ. ಮುಂಗಾರು ಆಗಮನದ ಆರಂಭದಲ್ಲೇ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಜೋರು ಮಳೆಯಾಗುತ್ತಿತ್ತು. ಈ ಬಾರಿ ಅಂತಹ ವಾತಾವರಣ ಕಾಣಿಸುತ್ತಿಲ್ಲ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳುತ್ತಾರೆ.