26 bird-catchers arrested in Ghana 
ರಾಜ್ಯ

ಘಾನಾದಲ್ಲಿ 26 ಹಕ್ಕಿಪಿಕ್ಕಿಗಳ ಬಂಧನ

ದಾವಣಗೆರೆ: ಆಫ್ರಿಕಾದ ಘಾನಾ ದೇಶದಲ್ಲಿ ಆಹಾರ ಮತ್ತು ಔಷಧ ಪ್ರಾಧಿಕಾರದಿಂದ ನೋಂದಣಿಯಾಗದ ಗಿಡಮೂಲಿಕೆ ಉತ್ಪನ್ನ ಮಾರಾಟ ಮಾಡಿದ ಆರೋಪದ ಮೇಲೆ ಕರ್ನಾಟಕದ ಹಕ್ಕಿಪಿಕ್ಕಿ ಸಮುದಾಯದ 26 ಜನರನ್ನು ಬಂಧಿಸಲಾಗಿದೆ. 
ಶಿವಮೊಗ್ಗ ಜಿಲ್ಲೆಯ 24 ಹಾಗೂ ದಾವಣಗೆರೆಯ ಚನ್ನಗಿರಿ ತಾಲೂಕು ಗೋಪನಾಳು ಗ್ರಾಮದ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ 12 ಮಂದಿ ಮಹಿಳೆಯರಾಗಿದ್ದಾರೆ. ಇವರೆಲ್ಲರೂ ಘಾನಾದ ಟುಮು ಪ್ರದೇಶದ ‘ವಾ’ ನಗರದಲ್ಲಿ ವಾಸವಾಗಿದ್ದರು. ಶಿವಮೊಗ್ಗದವರು 6 ತಿಂಗಳ ಹಿಂದೆ ಹೋಗಿದ್ದರು, ದಾವಣಗೆರೆಯ ಇಬ್ಬರು 1 ತಿಂಗಳ ಹಿಂದೆ ಅಲ್ಲಿಗೆ ತೆರಳಿದ್ದರು.
ಮೂರು ದಿನಗಳ ಹಿಂದೆ ವ್ಯಾಪಾರ ಮಾಡುತ್ತಿದ್ದ ವೇಳೆ ಅಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿ, 26 ಜನರನ್ನು ಬಂಧಿಸಿ ಪಾಸ್​ಪೋರ್ಟ್ ಹಾಗೂ ಗಿಡಮೂಲಿಕೆಗಳ ಬ್ಯಾಗ್ ವಶಕ್ಕೆ ಪಡೆದಿದ್ದಾರೆ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಪುನೀತ್​ಕುಮಾರ್ ಆರ್. ತಿಳಿಸಿದ್ದಾರೆ. ಅಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂರ್ಪಸಿ, ಭಾರತೀಯರ ನೆರವಿಗೆ ಬರುವಂತೆ ಮನವಿ ಮಾಡಿರುವುದಾಗಿ ಪುನೀತ್ ಹೇಳಿದರು.