- ಹೈಕೋರ್ಟ್ಗೆ ಮಾಹಿತಿ ನೀಡಿದ ಜಿ.ಬಿ.ಎ.
- ಮಾರ್ಗಸೂಚಿ ಪಾಲನೆಗೆ ನ್ಯಾಯಾಲಯದ ಆದೇಶ
ಬೆಂಗಳೂರು: ನಗರದ ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 5,000 ಪೇಯಿಂಗ್ ಗೆಸ್ಟ್ (ಪಿಜಿ) ವಸತಿನಿಲಯಗಳಿದ್ದು, ಅವುಗಳ ಪೈಕಿ ಸುಮಾರು 2,500 ಪಿ.ಜಿ.ಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ. ಸೂಕ್ತ ಪರವಾನಗಿ, ಕಟ್ಟಡ ನಕ್ಷೆ ಮತ್ತು ಅಗ್ನಿ ಸುರಕ್ಷತೆಗೆ ಸಂಬಂಧಿಸಿದ ಮಾನದಂಡಗಳನ್ನು ಪಾಲಿಸದೆ ಈ ಪಿ.ಜಿ.ಗಳನ್ನು ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೈಕೋರ್ಟ್ಗೆ ಜಿಬಿಎ ಮಾಹಿತಿ ನೀಡಿದೆ.
ವ್ಯಾಪಾರ ಪರವಾನಗಿ ಉಲ್ಲಂಘಿಸಲಾಗಿದೆ ಎಂದು ಬಿಬಿಎಂಪಿ ನೀಡಿದ್ದ ನೋಟಿಸ್ಗಳನ್ನು ಪ್ರಶ್ನಿಸಿ ಪಿ.ಜಿ. ಮಾಲೀಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸುತ್ತಿದೆ. ಫೆಬ್ರವರಿಯಲ್ಲಿ ಮಧ್ಯಂತರ ಆದೇಶ ಹೊರಡಿಸಿದ್ದ ಪೀಠ, ಜಿಬಿಎಗೆ ಕೆಲವು ನಿರ್ದೇಶನಗಳನ್ನು ನೀಡಿತ್ತು. ಇದೀಗ ಆ ಸಂಬಂಧ ಕೈಗೊಂಡಿರುವ ಕ್ರಮದ ಮಾಹಿತಿಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದೆ.
ಬೆಂಗಳೂರು ಉತ್ತರದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ 68 ಪಿ.ಜಿ.ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಉಳಿದ ಅಕ್ರಮ ಪಿ.ಜಿ.ಗಳ ಮಾಲೀಕರಿಗೂ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕಾಲಾವಕಾಶ ನೀಡಲಾಗುವುದು. ವಿಚಾರಣೆ ವೇಳೆ ಪಿ.ಜಿ.ಗಳನ್ನು ಅಕ್ರಮವಾಗಿ ನಡೆಸುತ್ತಿರುವುದು ಖಚಿತವಾದರೆ ಮುಚ್ಚಿಸಲಾಗುವುದು. ಸೂಕ್ತ ಕಟ್ಟಡ ನೆ ಮಂಜೂರಾತಿ ಮತ್ತು ಬೈಲಾಗಳನ್ನು ಪಾಲಿಸದೆ ನಿರ್ಮಿಸಿದ ಕಟ್ಟಡಗಳನ್ನು ಅಗತ್ಯವಾದರೆ ತೆರವುಗೊಳಿಸಲಾಗುವುದು. ಪಿ.ಜಿ. ಮಾಲೀಕರು ನ್ಯಾಯಾಲಯದಿಂದ ಏಕಪಯ ತಡೆಯಾಜ್ಞೆ ಪಡೆಯದಿರಲು ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಕೇವಿಯಟ್ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಜಿಬಿಎ ತಿಳಿಸಿದೆ.
ಸಮಗ್ರ ಪರಿಶೀಲನೆ ನಡೆಸಿ:
ಜಿಬಿಎ ನೀಡಿರುವ ಮಾಹಿತಿಗಳನ್ನು ಪರಿಶೀಲಿಸಿರುವ ನ್ಯಾಯಪೀಠ, ಇಂದೊಂದು ಗಂಭೀರ ಸಮಸ್ಯೆ ಎಂದು ಅವಲೋಕನ ಮಾಡಿದೆ. ಆದ್ದರಿಂದ, ನಗರದಲ್ಲಿರುವ ಎಲ್ಲ ಪಿಜಿಗಳನ್ನು ಗುರುತಿಸಿ, ಅವುಗಳ ಪರವಾನಗಿ, ಅಗ್ನಿ ಸುರಕ್ಷತೆ, ಸಿಸಿ ಕ್ಯಾಮರಾ, ಎಲ್ಪಿಜಿ, ನೈರ್ಮಲ್ಯ, ಆಹಾರ ಸುರಕ್ಷತೆ, ನಿವಾಸಿಗಳ ದಾಖಲೆ ಮತ್ತು ಭದ್ರತೆ ಮುಂತಾದ ಅಂಶಗಳ ಬಗ್ಗೆ ಜಿಬಿಎ, ಪೊಲೀಸ್, ಜಲಮಂಡಳಿ, ಬೆಸ್ಕಾಂ ಸೇರಿ ಸಂಬಂಧಿಸಿದ ಪ್ರಾಧಿಕಾರಗಳು ಸಮನ್ವಯದಿಂದ ಪರಿಶೀಲನೆ ನಡೆಸಿ ಆರು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸಬೇಕು. ಈ ಹಿಂದೆ ನೀಡಲಾಗಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಆದೇಶಿಸಿದೆ.
ಒಬ್ಬನಿಗೆ 70 ಚದರ ಅಡಿ ವ್ಯಾಪ್ತಿ
ಪಿಜಿ, ಹಾಸ್ಟೆಲ್, ಕೋ-ಲಿವಿಂಗ್, ಬೋರ್ಡಿಂಗ್ ಹೌಸ್ ಎಂಬ ಹೆಸರುಗಳನಿಟ್ಟುಕೊಂಡಿದ್ದರೂ ವಾಸ್ತವದಲ್ಲಿ ಪೇಯಿಂಗ್ ಗೆಸ್ಟ್ ಸ್ವರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅವುಗಳನ್ನು ಒಂದೇ ನಿಯಮದ ಅಡಿಯಲ್ಲಿ ತಂದು ನಿಯಂತ್ರಿಸಬೇಕು. ಪ್ರತಿ ನಿವಾಸಿಗೆ ಕನಿಷ್ಠ 70 ಚದರ ಅಡಿ ವಿಸ್ತೀರ್ಣದ ಸ್ಥಳಾವಕಾಶ ಇರಬೇಕು. ಕಾರಿಡಾರ್, ಮೆಟ್ಟಿಲು, ಬಾಲ್ಕನಿ, ಟೆರೇಸ್, ಪಾರ್ಕಿಂಗ್ ಸ್ಥಳಗಳನ್ನು ಮಲಗುವ ಜಾಗವಾಗಿ ಬಳಸುವಂತಿಲ್ಲ. ಸೆಕ್ಯುರಿಟಿ ಸಿಬ್ಬಂದಿ ನೇಮಿಸಬೇಕು, ಸಾಮರ್ಥ್ಯಕ್ಕಿಂತ ಹೆಚ್ಚು ಜನರಿಗೆ ವಾಸ್ತವ್ಯ ಕಲ್ಪಿಸುವಂತಿಲ್ಲ. ಜೀವಕ್ಕೆ ಅಪಾಯ ಕಂಡುಬರುವ ರಚನೆಗಳಿದ್ದರೆ ಪಿಜಿಗಳ ಪರವಾನಗಿ ಮುಗಿಯುವತನಕ ಕಾಯದೆ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.