ನಕಲಿ ಪಿಎಚ್.ಡಿ ಬಹಿರಂಗ 
ರಾಜ್ಯ

249 ಮಂದಿ ಅತಿಥಿ ಉಪನ್ಯಾಸಕರ ಪಿಎಚ್.ಡಿ ನಕಲಿ

ಪ್ರಮುಖ ಮುಖ್ಯಾಂಶಗಳು

  • ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಈ ಎಲ್ಲರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡುವುದಾಗಿ ಆದೇಶ
  • 249 ಮಂದಿಯಲ್ಲಿ ಕಲಬುರಗಿ ಪ್ರಾದೇಶಿಕ ವಿಭಾಗದಲ್ಲಿಯೇ 153 ಮಂದಿ ಪತ್ತೆಯಾಗಿದ್ದಾರೆ
  • ಪಟ್ಟಿಯಲ್ಲಿರುವ 249 ಮಂದಿ ಜತೆಗೆ ಮತ್ತಷ್ಟು ನಕಲಿ ಪಿಎಚ್.ಡಿ ಪ್ರಮಾಣಪತ್ರ ಹೊಂದಿರುವ ಅತಿಥಿ ಉಪನ್ಯಾಸಕರಿದ್ದಾರೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ.
ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕ ಹುದ್ದೆ ಉಳಿಸಿಕೊಳ್ಳುವ ದುರುದ್ದೇಶದಿಂದ 249 ಮಂದಿ ನಕಲಿ ಪಿಎಚ್.ಡಿ ಪ್ರಮಾಣಪತ್ರ ನೀಡಿರುವುದು ಕಾಲೇಜು ಮಟ್ಟದ ಸಮಿತಿ ಪರಿಶೀಲನೆಯಲ್ಲಿ ಬಹಿರಂಗಗೊಂಡಿದೆ.
ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿರುವ ಕಾಲೇಜು ಶಿಕ್ಷಣ ಇಲಾಖೆಯು ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಈ ಎಲ್ಲರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡುವುದಾಗಿ ಆದೇಶ ಹೊರಡಿಸಿದೆ.

ಕಲಬುರಗಿ ವಿಭಾಗದಲ್ಲೇ 153 ನಕಲಿಗಳು

ಪ್ರಾದೇಶಿಕವಾರು ನಕಲಿಗಳನ್ನು ಕೂಡ ಇಲಾಖೆಯು ಪತ್ತೆ ಹಚ್ಚಿದ್ದು, 249 ಮಂದಿಯಲ್ಲಿ ಕಲಬುರಗಿ ಪ್ರಾದೇಶಿಕ ವಿಭಾಗದಲ್ಲಿಯೇ 153 ಮಂದಿ ಪತ್ತೆಯಾಗಿದ್ದಾರೆ. ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 24, ಮೈಸೂರು- 22, ಶಿವಮೊಗ್ಗ-17, ಮಂಗಳೂರು-2, ಧಾರವಾಡ-31 ಇದ್ದಾರೆ.

ಅತಿಥಿಗಳನ್ನು ಪತ್ತೆಗೆ ಕಾರಣವೇನು?

ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಲು ಸಂಬಂಧಪಟ್ಟ ವಿಷಯದಲ್ಲಿ ನೆಟ್, ಕೆ-ಸೆಟ್ ಅಥವಾ ಪಿಎಚ್.ಡಿ ಪದವೀಧರರಾಗಿರಬೇಕು ಎಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ನಿಯಮವಿದೆ. ಈ ಹಿನ್ನೆಲೆಯಲ್ಲಿ ಪತ್ತೆ ಹಚ್ಚಲಾಗಿದೆ.
ರಾಜ್ಯಾದ್ಯಂತ 10,335 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. 2025-26ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿರುವ ಅತಿಥಿ ಉಪನ್ಯಾಸಕರ ಪಿಎಚ್.ಡಿ ಪ್ರಮಾಣಪತ್ರಗಳ ನೈಜತೆಯನ್ನು ಪರಿಶೀಲಿಸಲುವಂತೆ ಕಾಲೇಜು ಶಿಕ್ಷಣ ಇಲಾಖೆಯು ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿತ್ತು. ಅದರನ್ವಯ ಕಾಲೇಜು ಮಟ್ಟದ ಸಮಿತಿಯು ಪರಿಶೀಲಿಸಿದಾಗ, ನಕಲಿ/ಅಮಾನ್ಯ ಪಿಎಚ್.ಡಿ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವುದು ಬಹಿರಂಗಗೊಂಡಿದೆ.

ಪತ್ತೆಯಾಗಿದ್ದು ಹೇಗೆ?

ಹಿಂದಿನ ವರ್ಷದ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯವಿರುವ ಕಾರ್ಯಭಾರಕ್ಕೆ ಅನುಗುಣವಾಗಿ ಆನ್‌ಲೈನ್ ಕೌನ್ಸೆಲಿಂಗ್ ನಡೆಸಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನೀಡಿದ್ದ ಪ್ರಮಾಣಪತ್ರಗಳ ನೈಜತೆ ವರದಿಯನ್ನು ಕಡ್ಡಾಯವಾಗಿ ಸಂಬಂಧಪಟ್ಟ ವಿಶ್ವವಿದ್ಯಾಲಯ/ಸಂಸ್ಥೆಗಳಿಂದ ಒಂದು ಬಾರಿ ಪರಿಶೀಲಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಲಾಗಿತ್ತು. ಅದರನ್ವಯ ಪರಿಶೀಲಿಸಿದಾಗ ನಕಲಿಗಳ ಅಸಲಿಯತ್ತು ಬಹಿರಂಗವಾಗಿದೆ.

ಕ್ರಿಮಿನಲ್ ಕೇಸ್ ದಾಖಲು:

ಸರ್ಕಾರಕ್ಕೆ ಸುಳ್ಳು ಮಾಹಿತಿ/ದಾಖಲೆ ನೀಡಿ ವಂಚನೆ ಎಸಗಲು ಪ್ರಯತ್ನಿಸಿರುವುದರಿಂದ ಅವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವರದಿಯನ್ನು ಒಂದು ವಾರದೊಳಗೆ ಇಲಾಖೆ ಆಯುಕ್ತರ ಕಚೇರಿಗೆ ಸಲ್ಲಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಎಲ್ಲರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಬೇಕು ಎಂದು ಕಾಲೇಜು ಪ್ರಾಂಶುಪಾಲರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ತಪ್ಪಿಸಿಕೊಳ್ಳಲು ಅನಾರೋಗ್ಯದ ನೆಪ

ಪಟ್ಟಿಯಲ್ಲಿರುವ 249 ಮಂದಿ ಜತೆಗೆ ಮತ್ತಷ್ಟು ನಕಲಿ ಪಿಎಚ್.ಡಿ ಪ್ರಮಾಣಪತ್ರ ಹೊಂದಿರುವ ಅತಿಥಿ ಉಪನ್ಯಾಸಕರಿದ್ದಾರೆ ಎಂದು ಇಲಾಖೆಯ ಉನ್ನತ ಮೂಲಗಳು ಖಚಿತಪಡಿಸಿವೆ. ಪ್ರಮಾಣಪತ್ರದಿಂದ ತಪ್ಪಿಸಿಕೊಳ್ಳಲು ಅನಾರೋಗ್ಯದ ನೆಪ ನೀಡಿ ರಜೆಯ ಮೇಲೆ ತೆರಳಿದ್ದಾರೆ ಅಥವಾ ಈ ವರ್ಷದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ರಜೆಯ ಮೇಲಿರುವ ಅತಿಥಿ ಉಪನ್ಯಾಸಕರ ಪಟ್ಟಿಗಳನ್ನು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿದು ಬಂದಿದೆ.

ಶಹಾಪುರ ಕಾಲೇಜಲ್ಲೇ 20 ಮಂದಿ

ಶಹಾಪುರ ಸರ್ಕಾರಿ ಪದವಿ ಕಾಲೇಜೊಂದರಲ್ಲಿಯೇ 20 ಮಂದಿ ನಕಲಿ ಅತಿಥಿ ಉಪನ್ಯಾಸಕರಿದ್ದಾರೆ. ಬೀದರ್ ಪ್ರಥಮ ದರ್ಜೆ ಕಾಲೇಜಿನಲ್ಲಿ 19, ಗುಲ್ಬರ್ಗ ಮಹಿಳಾ ಕಾಲೇಜಿನಲ್ಲಿ 13 ಮತ್ತು ಕೊಪ್ಪಳ ಮಹಿಳಾ ಕಾಲೇಜಿನಲ್ಲಿ 7 ಮಂದಿ ಇರುವುದು ಪತ್ತೆಯಾಗಿದೆ.