- ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ₹62 ಸಾವಿರ ಹಣ ಫಲಾನುಭವಿಗಳ ಖಾತೆಗೆ
- ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ ಉಚಿತ ವಿದ್ಯುತ್, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ
ಗೃಹಲಕ್ಷ್ಮಿ ಯೋಜನೆಯ 32ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, ₹2,443 ಕೋಟಿ ರೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮೂರ್ನಾಲ್ಕು ದಿನಗಳಲ್ಲಿ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯ ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ ಹಾಗೂ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ₹62 ಸಾವಿರ ಹಣ ಫಲಾನುಭವಿಗಳ ಖಾತೆಗೆ ತಲುಪಿದ್ದು, 32ನೇ ಕಂತಿನ ಹಣ ಬಿಡುಗಡೆಯೊಂದಿಗೆ ಒಟ್ಟು ₹64 ಸಾವಿರ ತಲುಪಲಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ 200 ಯುನಿಟ್‌ವರೆಗೆ ಉಚಿತ ವಿದ್ಯುತ್, ಅನ್ನಭಾಗ್ಯ, ಶಕ್ತಿ ಹಾಗೂ ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರ ಇದುವರೆಗೆ ₹1.46 ಲಕ್ಷ ಕೋಟಿ ವೆಚ್ಚ ಮಾಡಿದೆ. ಇದರಿಂದ ಪ್ರತಿ ಕುಟುಂಬಕ್ಕೆ ಸರಾಸರಿ ₹5ರಿಂದ ₹6 ಸಾವಿರದಷ್ಟು ಉಳಿತಾಯವಾಗುತ್ತಿದೆ ಎಂದರು.
ದುರುಪಯೋಗ ತಡೆಗೆ ಪರಿಷ್ಕರಣೆ:
ಅರ್ಹ ಫಲಾನುಭವಿಗಳಿಗೆ ಮಾತ್ರ ಗ್ಯಾರಂಟಿ ಯೋಜನೆಗಳ ಸೌಲಭ್ಯ ತಲುಪಬೇಕು ಹಾಗೂ ದುರುಪಯೋಗ ತಡೆಯಬೇಕು ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದ 1,95,224 ಫಲಾನುಭವಿಗಳು ಮೃತಪಟ್ಟಿದ್ದರೂ, ಅವರ ಖಾತೆಗಳಿಗೆ ಸುಮಾರು ₹115 ಕೋಟಿ ಹಣ ಪಾವತಿಯಾಗಿರುವುದು ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳನ್ನು ತಡೆಯಲು ಮೃತ ಫಲಾನುಭವಿಗಳ ಹೆಸರನ್ನು 15 ದಿನಗಳೊಳಗೆ ಪಟ್ಟಿಯಿಂದ ಕೈಬಿಡುವಂತೆ ಶೀಘ್ರದಲ್ಲೇ ಮಾರ್ಗಸೂಚಿ ರೂಪಿಸಲಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ನೀಡಲಾಗುತ್ತಿರುವ ಉಚಿತ ವಿದ್ಯುತ್‌ನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲೂ ಯೋಜನೆ ಪರಿಷ್ಕರಣೆ ಮಾಡಲಾಗುತ್ತಿದೆ ಎಂದರು.
1.24 ಕೋಟಿ ಕುಟುಂಬಕ್ಕೆ ಅಕ್ಕಿ:
ರಾಜ್ಯದಲ್ಲಿ 1.24 ಕೋಟಿ ಪಡಿತರ ಚೀಟಿದಾರರಿಗೆ ಸರ್ಕಾರ ಉಚಿತವಾಗಿ ಅಕ್ಕಿ ವಿತರಿಸುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ವಾರ್ಡ್ ಮಟ್ಟದಲ್ಲಿ ಫಲಾನುಭವಿಗಳ ಸಮಾವೇಶ ಹಾಗೂ ಗ್ಯಾರಂಟಿ ಉತ್ಸವಗಳನ್ನು ಆಯೋಜಿಸುವಂತೆ ಕರೆ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ಇಂದಿರಾ ಕಿಟ್ ವಿತರಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ನ್ಯಾಯಬೆಲೆ ಅಂಗಡಿಗಳ ಮಾಸಿಕ ಸಭೆ ನಡೆಸಿ, ವೇಳಾಪಟ್ಟಿಯನ್ನು ಪ್ರಕಟಿಸಬೇಕು. ರಾಜ್ಯದ 22 ಸಾವಿರ ನ್ಯಾಯಬೆಲೆ ಅಂಗಡಿಗಳು ದಿನಪೂರ್ತಿ ತೆರೆದಿರುವಂತೆ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರತಿ ತಿಂಗಳು ಸಭೆ ನಡೆಸಿ ವರದಿ ಸಲ್ಲಿಸಬೇಕು. ಸಭೆಗೆ ಗೈರಾಗುವ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಗೃಹಜ್ಯೋತಿ ಪರಿಷ್ಕರಣೆ ಪ್ರಗತಿ:
ಜಿಬಿಎ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆ ಕಾರ್ಯ ತ್ವರಿತವಾಗಿ ನಡೆಯುತ್ತಿದೆ. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಶೇ.90, ಯಲಹಂಕದಲ್ಲಿ ಶೇ.47.68, ಬ್ಯಾಟರಾಯನಪುರದಲ್ಲಿ ಶೇ.55 ಹಾಗೂ ಹೆಬ್ಬಾಳದಲ್ಲಿ ಶೇ.52ರಷ್ಟು ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಬಿಎ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷೆ ಲಾವಣ್ಯ ನರಸಿಂಹಮೂರ್ತಿ ಸೇರಿದಂತೆ ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ ಹಾಗೂ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
*ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಮನೆಮನೆಗೂ ತಲುಪಬೇಕು. ಫಲಾನುಭವಿಗಳ ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಿ ಅವರ ಕುಂದುಕೊರತೆಗಳನ್ನು ಆಲಿಸಬೇಕು. ಯೋಜನೆಗಳ ಕುರಿತು ಮಾಹಿತಿ ನೀಡಲು ಹಾಗೂ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಇದರಿಂದ ಸಾಧ್ಯ.
-ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ