Digital Arrest Fraud Bengaluru  
ರಾಜ್ಯ

ಡಿಜಿಟಲ್​ ಅರೆಸ್ಟ್​ ನೆಪದಲ್ಲಿ ಅಜ್ಜಿಗೆ 24 ಕೋಟಿ ರೂ.ಪಂಗನಾಮ!; ಖತರ್ನಾಕ್​ ಕಳ್ಳರು ಪೊಲೀಸರ ಬಳಿ ತಗ್ಲಾಕ್ಕೊಂಡಿದ್ದು ಹೇಗೆ?.. Bengaluru

ಪ್ರಮುಖ ಮುಖ್ಯಾಂಶಗಳು

  • ವೃದ್ಧೆಯ ಬ್ಯಾಂಕ್​ ಮಾಹಿತಿ ಮೇರೆಗೆ ಡಿಜಿಟಲ್​ ಅರೆಸ್ಟ್ ನಾಟಕವಾಡಿ ಹಣ ಪೀಕಿದ ವಂಚಕರು
  • ಶಿವಾಜಿನಗರದ ನಿವಾಸಿ ಲಕ್ಷ್ಮಿ ಎಂಬುವವರಿಂದ 24 ಕೋಟಿ ದೋಚಿದ್ದ ಕಿರಾತಕರು
  • ಬ್ಯಾಂಕ್​ಗೆ ಚಿನ್ನ ಅಡವಿಡಲು ಹೋದಾಗ ಬೆಳಕಿಗೆ ಬಂತು ಪ್ರಕರಣ
ಬೆಂಗಳೂರು: ಇತ್ತೀಚಿನ ದಿನಗಳಲ್ಲಂತೂ ಸೈಬರ್​ ಕ್ರೈಂ, ಡಿಜಿಟಲ್​ ಅರೆಸ್ಟ್, ಬ್ಯಾಂಕ್​ ಹ್ಯಾಕ್ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲಿ ಹೆಚ್ಚು ಮೋಸ ಹೋಗುವವರು ನಿವೃತ್ತ ವೈದ್ಯರು, ಟೆಕ್ಕಿಗಳು ಹಾಗೂ ಶಾಲಾ ಶಿಕ್ಷಕರು. ಸದ್ಯ ಬೆಂಗಳೂರಿನ ಶಿವಾಜಿನಗರದಲ್ಲಿ ವೃದ್ಧೆಯೊಬ್ಬರು ಡಿಜಿಟಲ್​ ಅರೆಸ್ಟ್​ನಿಂದಾಗಿ (Digital Arrest)24 ಕೋಟಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. 
ಶಿವಾಜಿ ನಗರದ ನಿವಾಸಿಯಾಗಿರುವ ಲಕ್ಷ್ಮೀ ಎಂಬುವವರು ಇತ್ತೀಚೆಗೆ ಆಸ್ತಿ ಮಾರಿದ್ದರು ಅದರಿಂದ ಅವರಿಗೆ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಇವರ ಬ್ಯಾಂಕ್​ ವಹಿವಾಟು ಮಾಹಿತಿ ಪಡೆದುಕೊಂಡಿದ್ದ ಆರೋಪಿಗಳನ್ನು ಅವರನ್ನು ಡಿಜಿಟಲ್​ ಅರೆಸ್ಟ್​ಗೆ ಒಳಪಡಿಸಿದ್ದರು. 
ಸಿಬಿಐ ಮತ್ತು ಮುಂಬೈ ಪೊಲೀಸರ ಹೆಸರಿನಲ್ಲಿ ವೃದ್ಧೆಗೆ ಕರೆ ಮಾಡಿದ್ದ ವಂಚಕರು, ನಿಮ್ಮ ಮೇಲೆ ಅಕ್ರಮ ಹಣ ವರ್ಗಾವಣೆ ಕೇಸ್ ಇದೆ ಎಂದು ಅವರಿಗೆ ಭಯ ಹುಟ್ಟಿಸಿದರು. ಜನವರಿಯಿಂದ ಅವರನ್ನು ಡಿಜಿಟಲ್​ ಅರೆಸ್ಟ್​ಗೆ ಒಳಪಡಿಸಿದ್ದಾರೆ. ಯಾರಿಗೂ ಈ ಬಗ್ಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾರೆ. ಹಂತ ಹಂತವಾಗಿ ಅವರಿಂದ 24 ಕೋಟಿ ಹಣವನ್ನು ಪೀಕಿದ್ದಾರೆ. ಇಷ್ಟಾಗಿಯೂ ಹಣ ದಾಹ ನಿಲ್ಲದೆ, ನಿಮ್ಮ ಕೇಸ್ ಕ್ಲಿಯರ್ ಆಗಬೇಕಾದರೆ ಇನ್ನೂ ಹಣ ಬೇಕು, ತಕ್ಷಣ ಬ್ಯಾಂಕ್‌ನಲ್ಲಿರುವ ನಿಮ್ಮ ಚಿನ್ನದ ಒಡವೆಗಳ ಮೇಲೆ ಲೋನ್ ಪಡೆದು ಹಣ ಕಳುಹಿಸಿ" ಎಂದು ತಾಕೀತು ಮಾಡಿದ್ದರು.

ಬ್ಯಾಂಕ್​ ಮ್ಯಾನೇಜರ್​ನಿಂದ ಉಳಿಯಿತು ಹಣ

ಗಾಬರಿಯಿಂದಲೇ 300 ಗ್ರಾಂ ಚಿನ್ನವನ್ನು ಅಡವಿಡಲು ಬ್ಯಾಂಕ್​ಗೆ ತೆರಳಿದ್ದರು. ಈ ವೇಳೆ ಬ್ಯಾಂಕ್​ ಸಿಬ್ಬಂದಿ ಜೊತೆಗೆ ಮಾತನಾಡುವಾಗ ಏನೇನೋ ಮಾತನಾಡುತ್ತಿದ್ದರು. ತೀವ್ರ ಆತಂಕದಲ್ಲಿದ್ದರು ಇದನ್ನು ಗಮನಿಸಿದ ಬ್ಯಾಂಕ್​ ಮ್ಯಾನೇಜರ್​ ಸಂಶಯಕ್ಕೊಳಗಾಗಿ, ವೃದ್ಧೆಯ ಖಾತೆ ಗಮನಿಸಿದ್ದಾರೆ.  ಕೆಲ ದಿನದಲ್ಲಿ  24 ಕೋಟಿ ಟ್ರಾನ್ಸಫರ್​ ಆಗಿರುವುದು ಪತ್ತೆಯಾಗಿದೆ. 
ಇದು  ಸೈಬರ್ ವಂಚನೆ ಎಂಬುದನ್ನು ತಕ್ಷಣವೇ ಅರಿತುಕೊಂಡ ಮ್ಯಾನೇಜರ್, ವೃದ್ಧೆಗೆ ಧೈರ್ಯ ತುಂಬಿ ತಕ್ಷಣವೇ ಸೈಬರ್ ಕ್ರೈಂ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಬ್ಯಾಂಕ್​ಗೆ ಧಾವಿಸಿದ ಪೊಲೀಸರು ಲಕ್ಷ್ಮೀ ಅವರನ್ನು ವಿಚಾರಣೆ ನಡೆಸಿದಾಗ ತಾವು, ಡಿಜಿಟಲ್​ ಅರೆಸ್ಟ್​ಗೆ ಒಳಗಾಗಿರುವ​ ಬಗ್ಗೆ ಸಂತ್ರಸ್ತೆ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲದೇ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ?

ಇಷ್ಟೇ ಅಲ್ಲದೇ ವಿದೇಶದಲ್ಲಿರುವ ಲಕ್ಷ್ಮಿ ಅವರ ಮಕ್ಕಳಿಗೆ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.  ಬ್ಯಾಂಕ್​  ಮ್ಯಾನೇಜರ್​​ ಕೊಟ್ಟ ತಾಂತ್ರಿಕ ಸುಳಿವುಗಳ  ಮೂಲಕ ತನಿಖೆ ನಡೆಸಿದ ಪೊಲೀಸರು,  ಮುಂಬೈ ,ಅಲಹಬಾದ್, ದೆಹಲಿ ಮೂಲದ ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಸುಲಿಗೆ ಮಾಡಿದ್ದ ಹಣವನ್ನು ಆರೋಪಿಗಳು ಒಟ್ಟು 22 ಖಾತೆಗಳಿಗೆ ವರ್ಗಾಯಿಸಿರುವುದು ತಿಳಿದುಬಂದಿದೆ. ಅದರ ಮೇರೆಗೆ 60 ಲಕ್ಷ ಹಣ ಇರುವ ವಂಚಕರ ಖಾತೆಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ, (ಏಜೆನ್ಸೀಸ್).