- ಮಾನಸಿಕ ಅಸ್ವಸ್ಥ ವಿಚಾರಣಾಧೀನ ಕೈದಿ ಪರ ಅರ್ಜಿ ಸಲ್ಲಿಕೆ
ಬೆಂಗಳೂರು: ಕೊಲೆ ಆರೋಪದಲ್ಲಿ 2005ರಲ್ಲಿ ಬಂಧನಕ್ಕೊಳಗಾದ ವ್ಯಕ್ತಿ 21 ವರ್ಷಗಳಿಂದಲೂ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿದ್ದಾರೆ! ಹೌದು, ವಿಚಾರಣೆ ಸಂದರ್ಭದಲ್ಲಿ ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ವೈದ್ಯಕಿಯ ಪರೀಕ್ಷೆಯಲ್ಲಿ ದೃಢಪಟ್ಟ ಕಾರಣ 2015ರಲ್ಲೇ ವಿಚಾರಣಾ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈ ಕಾರಣಕ್ಕೆ ಪ್ರಕರಣ ಇತ್ಯರ್ಥವಾಗದೆ ಶಿಕ್ಷೆಯಾಗದಿದ್ದರೂ ಸುಮಾರು ಎರಡು ದಶಕಗಳಿಂದ ನ್ಯಾಯಾಂಗ ಬಂಧನದಲ್ಲಿ ಉಳಿಯುಂತಾಗಿದೆ.
ಸುದೀರ್ ವಿಳಂಬದ ನಂತರ ಆತನ ಪರವಾಗಿ ಯುವ ವಕೀಲರಿಬ್ಬರು ಪ್ರಕರಣದ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರಾದರೂ, ವಿಚಾರಣಾ ನ್ಯಾಯಾಲಯದಲ್ಲಿ ಕಡತಗಳೇ ನಾಪತ್ತೆಯಾಗಿವೆ! ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಪ್ರಕರಣ ಕುರಿತು ವರದಿ ಕೇಳಿದೆ.
ಕಳೆದ ಎರಡು ದಶಕಗಳಿಂದ ಜೈಲಿನಲ್ಲಿರುವ ಕೋಲಾರದ ವಿ.ಶ್ರೀನಿವಾಸ ಎಂಬುವರಿಗೆ ಸಂಬಂಧಿಸಿ ವಕೀಲರಾದ ಎ. ವಿಕ್ರಮ್ ರಾಜ್ ಮತ್ತು ಅಶ್ವಿನ್ ಜಾಯ್ಸ್ಟನ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಕೈದಿಗೆ ನೀಡಲಾಗಿರುವ ಕಾನೂನು ಹಾಗೂ ವೈದ್ಯಕಿಯ ನೆರವಿನ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಸ್ಎಲ್ಎಸ್ಎ) ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ:
ಪತ್ನಿಯನ್ನು ಕೊಲೆಗೈದ ಆರೋಪದಲ್ಲಿ ಕೋಲಾರ ಗ್ರಾಮಾಂತರ ಪೊಲೀಸರು 2005ರಲ್ಲಿ ಶ್ರೀನಿವಾಸನನ್ನು ಬಂಧಿಸಿದ್ದರು. ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಆ ನಂತರದಿಂದ ಜೈಲಿನಲ್ಲಿಯೇ ಉಳಿದಿದ್ದಾರೆ. ನಂತರದ ವಿಚಾರಣೆ ವೇಳೆ ಅವರ ಮಾನಸಿಕ ಆರೋಗ್ಯದ ಬಗ್ಗೆ ನ್ಯಾಯಾಲಯಕ್ಕೆ ಅನುಮಾನ ಬಂದ ಹಿನ್ನೆಲೆಯಲ್ಲಿ ನಿಮ್ಹಾನ್ಸ್ನಿಂದ ವೈದ್ಯಕಿಯ ಅಭಿಪ್ರಾಯ ಪಡೆಯಲಾಗಿತ್ತು.
ನಿಮ್ಹಾನ್ಸ್ ನೀಡಿದ ವೈದ್ಯಕಿಯ ವರದಿ ಆಧಾರದ ಮೇಲೆ, ವಿಚಾರಣಾ ನ್ಯಾಯಾಲಯವು ಆರೋಪಿಯು ತನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ವಿಚಾರಣೆ ಎದುರಿಸಲು ಅಸಮರ್ಥರಾಗಿದ್ದಾರೆ ಎಂದು 2015ರ ಸೆ.3ರಂದು ಘೋಷಿಸಿತ್ತು. ವಿಚಾರಣೆ ಸ್ಥಗಿತಗೊಳಿಸಿ, ಬೆಂಗಳೂರಿನ ಕೇಂದ್ರ ಕಾರಾಗೃಹದ ಮನೋ ವೈದ್ಯಕಿಯ ವಾರ್ಡ್ ಅಥವಾ ಧಾರವಾಡದ ಮಾನಸಿಕ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸುವಂತೆ ಆದೇಶಿಸಿತ್ತು. ಚೇತರಿಸಿಕೊಂಡ ನಂತರ ವಿಚಾರಣೆ ಆರಂಭಿಸುವುದಾಗಿ ತಿಳಿಸಿತ್ತು. ಆದರೆ, ಆ ಬಳಿಕ ಯಾವುದೇ ಬೆಳವಣಿಗೆಗಳು ಆಗಿಲ್ಲ.
2026ರ ಆ.19ರಂದು ಕೋಲಾರದ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಆರೋಪಿ ಪರ ವಕೀಲರು, ಪ್ರಕರಣದ ದಾಖಲೆಗಳನ್ನು ಕೇಳಿದ್ದರು. ಆದರೆ, ದಾಖಲೆಗಳು ನ್ಯಾಯಾಲಯದ ರೆಕಾರ್ಡ್ ಕೊಠಡಿಗೆ ಬಂದಿಲ್ಲ ಎಂಬ ಹಿಂಬರಹದೊಂದಿಗೆ ಅರ್ಜಿ ವಾಪಾಸ್ ಆಗಿತ್ತು. ಸಾಮಾನ್ಯವಾಗಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ಕೈದಿಗಳು 14 ವರ್ಷದ ಶಿಕ್ಷೆ ಮುಗಿಸಿ ಹೊರಬರುತ್ತಿದ್ದಾರೆ. ಹಾಗಿರುವಾಗ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಆರೋಪಿಯೊಬ್ಬ, 21 ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೊಂದಿಗೆ ಯುವ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸರ್ಕಾರದ ಪರ ವಕೀಲರು, ಶ್ರೀನಿವಾಸ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದ ಮನೋವೈದ್ಯಕಿಯ ವಾರ್ಡ್ನಲ್ಲಿ ನೀಡಲಾಗಿರುವ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಗುರುವಾರ ಹೈಕೋರ್ಟ್ಗೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆಗೆ ಕೆಎಸ್ಎಲ್ಎಸ್ಎಯಿಂದ ಜವಾಬ್ದಾರಿಯುತ ಅಧಿಕಾರಿಯನ್ನು ನಿಯೋಜಿಸಬೇಕು. ಅವರು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಯ ಸ್ಥಿತಿ ಪರಿಶೀಲಿಸಬೇಕು. ಅವರಿಗೆ ಈವರೆಗೆ ಒದಗಿಸಿರುವ ಕಾನೂನು ಮತ್ತು ವೈದ್ಯಕಿಯ ನೆರವಿನ ವಿವರಗಳ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.