202 ತಾಲೂಕುಗಳಲ್ಲಿ ಮಳೆ ಅಭಾವ 
ರಾಜ್ಯ

ರಾಜ್ಯದ 202 ತಾಲೂಕುಗಳು ಮಳೆ ಕೊರತೆ- 202 taluks drought

ಬೆಂಗಳೂರು: ರಾಜ್ಯದ 182 ತಾಲೂಕುಗಳಲ್ಲಿ ಮಳೆ ಅಭಾವ( rainfall deficit) ಉಂಟಾದರೆ, 20 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ(ಕೆಎಸ್‌ಎನ್‌ಡಿಎಂಸಿ) ನೀಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಇದರ ನಡುವೆಯೂ ‘ಎಲ್‌ನಿನೋ’ ಪರಿಣಾಮವು ಮುಂದಿನ ವರ್ಷದ ಬೇಸಿಗೆವರೆಗೆ ಇರಲಿದೆ ಎಂದು ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ ಕೊರತೆ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಅಧಿಕೃತವಾಗಿ ‘ಬರಪೀಡಿತ’ ಎಂದು ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಆಡಳಿತ ಮತ್ತು ವಿರೋಧಪಕ್ಷಗಳ ಶಾಸಕರು, ಇನ್ನಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
ಜೂ 1ರಿಂದ ಸೆ.7ವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 725 ಮಿಮೀ ಮಳೆಯಾಗಬೇಕಿತ್ತು. ಆದರೆ, 485 ಮಿಮೀ ಮಳೆ ಸುರಿದಿದ್ದು, ಶೇ. 33 ಮಳೆ ಅಭಾವ ಉಂಟಾಗಿದೆ. ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಯಂತೆ 2,890 ಮಿಮೀ ಬದಲಾಗಿ 2,155 ಮಿಮೀ ಮಳೆ ಬಿದ್ದಿದ್ದು, ಶೇ.25 ಮಳೆ ಕುಂಠಿತವಾಗಿದೆ. ಮಲೆನಾಡಿನ ಪ್ರದೇಶಗಳಲ್ಲಿ 1,423 ಮಿಮೀ ಮಳೆಯಾಗಬೇಕಿತ್ತು. ಆದರೆ, 915 ಮಿಮೀ ಸುರಿದಿದ್ದು, ಶೇ. 36 ಮಳೆ ಕೊರತೆಯಾಗಿದೆ.
ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 255 ಮಿಮೀ ಬದಲಾಗಿ 137 ಮಿಮೀ ಸುರಿದಿದ್ದು, ಶೇ.46 ಹಾಗೂ ಉತ್ತರ ಕರ್ನಾಟಕದ ವ್ಯಾಪ್ತಿಯಲ್ಲಿ 362 ಮಿಮೀ ಬದಲಾಗಿ 226 ಮಿಮೀ ಬಿದ್ದಿದ್ದು, ಶೇ. 37 ಮಳೆ ಕುಂಠಿತವಾಗಿದೆ. ಈ ಅವಧಿಯಲ್ಲಿ 30 ಜಿಲ್ಲೆಗಳಿಂದ 182 ತಾಲೂಕುಗಳಲ್ಲಿ ಶೇ.50ವರೆಗೆ ಮಳೆ ಕೊರತೆ ಉಂಟಾದರೆ, 20 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ.
ಹೆಚ್ಚು ಮಳೆ ಕೊರತೆಯ ಜಿಲ್ಲೆಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಕ್ಕಿಂತ ಚಾಮರಾಜನಗರ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ವಿಜಯನಗರ ಕ್ರಮವಾಗಿ 2ನೇ ಸ್ಥಾನದಲ್ಲಿವೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಮತ್ತು ಧಾರವಾಡದಲ್ಲಿ ಶೇ.30ರಿಂದ ಶೇ.45ವರೆಗೆ ಮಳೆ ಕೊರತೆ ಎದುರಾಗಿದೆ. ಬೆಳಗಾವಿಯಲ್ಲಿ ಮಾತ್ರ ವಾಡಿಕೆಯಂತೆ ಮಳೆ ಸುರಿದಿದ್ದರೂ ಕೆಲ ಭಾಗಗಳಲ್ಲಿ ಅಭಾವ ಎದುರಾಗಿದೆ.
ಅಕ್ಟೋಬರ್ ಅಂತ್ಯದವರೆಗೆ ಕಾಲಾವಕಾಶ:
ರಾಜ್ಯದಲ್ಲಿ ಹಂತ ಹಂತವಾಗಿ ಇನ್ನಷ್ಟು ತಾಲೂಕುಗಳ ಬರ ೋಷಿಸಲು ಅಕ್ಟೋಬರ್ ಅಂತ್ಯದವರೆಗೆ ಕಾಲಾವಕಾಶ ಇದೆ. ಬರ ಘೋಷಿಸಲು ಬರೀ ಮಳೆ ಕೊರತೆ ಮಾನದಂಡವಲ್ಲ. ಬದಲಾಗಿ ಹಲವು ಮಾನದಂಡಗಳ ಆಧಾರದಲ್ಲಿ ಬರ ಘೋಷಿಸಲಾಗುತ್ತದೆ. ಕೇಂದ್ರ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಮಂತ್ರಾಲಯವು ‘ಬರ ಕೈಪಿಡಿ 2016’ರ ಪ್ರಕಾರ ದೇಶದಲ್ಲಿ ಬರಪೀಡಿತ ತಾಲೂಕು ಘೋಷಿಸಲು ಕೆಲವೊಂದು ಮಾನದಂಡ ನಿಗದಿಪಡಿಸಿದೆ. ಮಳೆ ಕೊರತೆಯು ಶೇ.60ಕ್ಕಿಂತ ಹೆಚ್ಚು ಇರಬೇಕು, ಶುಷ್ಕ ವಾತಾವರಣವು ಸತತ 3 ವಾರ ಅಥವಾ ಅದಕ್ಕಿಂತ ಹೆಚ್ಚು ಅವಧಿ ಮುಂದುವರಿದಿರಬೇಕು, ಕೃಷಿ ಬಿತ್ತನೆ ಪ್ರದೇಶವು ಶೇ. 75ಕ್ಕಿಂತ ಕಡಿಮೆಯಾಗಿರಬೇಕು, ಉಪಗ್ರಹ ಆಧಾರಿತ ಬೆಳೆ ಸೂಚ್ಯಂಕ ಮತ್ತು ತೇವಾಂಶ ಕೊರತೆ ಶೇ. 50ಕ್ಕಿಂತ ಕಡಿಮೆಯಿರಬೇಕು, ಜಲಾಶಯಗಳು, ನದಿ, ಅಂತರ್ಜಲ ಮತ್ತು ಕೆರೆಗಳ ನೀರಿನ ಮಟ್ಟ ಕುಸಿತವಾಗಿರಬೇಕು ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸೆಡ್ಡಿ ಹೇಳುತ್ತಾರೆ.
ಹಂತ-2ರ ಮಾನದಂಡಗಳಲ್ಲಿ ಕನಿಷ್ಠ 3 ಮಾನದಂಡಗಳು ಕಂಡುಬಂದರೆ ಅದನ್ನು ‘ತೀವ್ರ ಬರ’ ಮತ್ತು ಎರಡು ಮಾನದಂಡಗಳು ಕಂಡುಬಂದರೆ ‘ಸಾಧಾರಣ ಬರ ’ ಎಂದು ನಿರ್ಧರಿಸಲಾಗುತ್ತದೆ. ಶೇ.30 ರಿಂದ ಶೇ.50ವರೆಗೆ ಬೆಳೆ ನಷ್ಟವಾದರೆ ‘ಸಾಧಾರಣ ಬರ’ ಮತ್ತು ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟವಾದರೆ ತೀವ್ರ ಬರ ಎಂದು ೋಷಿಸಲಾಗುತ್ತದೆ. ಬರ ಪರಿಸ್ಥಿತಿ ನಿಭಾಯಿಸಲು ರಾಜ್ಯ ವಿಪತ್ತು ಪರಿಹಾರ ನಿಧಿಯಲ್ಲಿ ಹಣಕಾಸಿನ ಕೊರತೆ ಕಂಡುಬಂದಲ್ಲಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳ ಅನ್ವಯ ಕೇಂದ್ರ ಸರ್ಕಾರಕ್ಕೆ ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಲು ಅವಕಾಶ ಇದೆ ಎಂದು ‘ವಿಜಯವಾಣಿಗೆ’ ತಿಳಿಸಿದರು.
ಪ್ರಸ್ತುತ ಹವಾಮಾನ ಪರಿಸ್ಥಿತಿಯನ್ನು ಅವಲೋಕಿಸಿದರೆ 2027ರ ಬೇಸಿಗೆವರೆಗೆ ‘ಎಲ್‌ನಿನೋ’ ಪರಿಣಾಮ ಇರುತ್ತದೆ. ಆದರೆ, ಮುಂದಿನ ಬೇಸಿಗೆ ಸಂದರ್ಭದಲ್ಲಿರುವ ‘ಎಲ್‌ನಿನೋ’ ಸ್ಥಿತಿಯ ಆಧಾರದಲ್ಲಿ ಇದು ಮುಂದುವರಿಯಲಿದೆಯೇ ಅಥವಾ ಇಲ್ಲವೋ ಎಂಬುದರ ಬಗ್ಗೆ ಹೇಳಬಹುದು.
ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.