- ದಶಕಗಳ ಹಿಂದಿನ ಪ್ರಕರಣದಲ್ಲಿ ಹೈಕೋರ್ಟ್ ಆದೇಶ
- ಅರ್ಹ ವೈದ್ಯಕಿಯ ಅಭ್ಯರ್ಥಿಗಳಿಗೆ ವಂಚಿಸಿದ್ದ ಸಂಸ್ಥೆಗಳಿಗೆ ಭಾರಿ ದಂಡ
ಬೆಂಗಳೂರು: ಮೆರಿಟ್ ಆಧಾರದಲ್ಲಿ ಹಂಚಿಕೆಯಾಗಿದ್ದ ಎಂಬಿಬಿಎಸ್ ಸೀಟುಗಳನ್ನು ನಿರಾಕರಿಸಿದ್ದ ಕ್ರಮ ಪ್ರಶ್ನಿಸಿ ಇಬ್ಬರು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕರ್ನಾಟಕ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಒಕ್ಕೂಟ (ಎಎಂಪಿಸಿಕೆ) ಮತ್ತು ಬೆಂಗಳೂರಿನ ಖಾಸಗಿ ವೈದ್ಯಕಿಯ ಕಾಲೇಜೊಂದಕ್ಕೆ ತಲಾ 20 ಲಕ್ಷಗಳಂತೆ ಒಟ್ಟು 40 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಬೆಂಗಳೂರಿನ ಸ್ಪರ್ಶಾ ವಿಜಯ್ ಮತ್ತು ತುಮಕೂರಿನ ಕೆ.ಸಿ. ಮಂಜುನಾಥ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ದಂಡದ ಮೊತ್ತವನ್ನು ಸಂತ್ರಸ್ತ ಅಭ್ಯರ್ಥಿಗಳಿಗೆ ಪಾವತಿಸಲು ನಿರ್ದೇಶನ ನೀಡಲಾಗಿದೆ.
ಅರ್ಜಿದಾರರು 2016-17ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಎಎಂಪಿಸಿಕೆ ನಡೆಸಿದ ಎರಡನೇ ಸುತ್ತಿನ ಕೌನ್ಸೆಲಿಂಗ್ನಲ್ಲಿ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದರು.2016 ಸೆ. 30ಕ್ಕೆ ನಿಗದಿ ಮಾಡಲಾಗಿದ್ದ ಅಂತಿಮ ಗಡುವಿನೊಳಗೆ ಕೋರ್ಸ್ ಶುಲ್ಕದ 5.75 ಲಕ್ಷ ಮೊತ್ತದ ಡಿಮಾಂಡ್ ಡ್ರಾಫ್ಟ್ (ಡಿಡಿ) ಮತ್ತು ಇತರ ಅಗತ್ಯ ದಾಖಲೆಗಳೊಂದಿಗೆ ಕಾಲೇಜಿಗೆ ವರದಿ ಮಾಡಿಕೊಂಡಿದ್ದರೂ, ಸೀಟುಗಳ ಲಭ್ಯತೆಯಿಲ್ಲ ಎಂಬ ಕಾರಣ ನೀಡಿ ಕಾಲೇಜು ಆಡಳಿತ ಮಂಡಳಿಯು ಅರ್ಜಿದಾರರನ್ನು ವಾಪಾಸು ಕಳುಹಿಸಿತ್ತು.
ಈ ಬಗ್ಗೆ ಪ್ರಶ್ನಿಸಲು ಎಎಂಪಿಸಿಕೆ ಕಚೇರಿಗೆ ಬೇಟಿ ನೀಡಿದಾಗ ಅದು ಮುಚ್ಚಲ್ಪಟ್ಟಿತ್ತು ಮತ್ತು ಇವರು ಕಳುಹಿಸಿದ್ದ ಇ-ಮೇಲ್ಗಳಿಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಅವಧಿಯಲ್ಲಿ ಅರ್ಜಿದಾರರಿಗಿಂತ ಕಡಿಮೆ ಅಂಕಗಳಿಸಿದ್ದ ಬೇರೆ ಇಬ್ಬರು ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿದ್ದ ಕಾಲೇಜು ಆಡಳಿತ ಮಂಡಳಿಯು ಪ್ರವೇಶಾತಿ ನೀಡಿತ್ತು. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು 3 ಕೋಟಿ ರೂಪಾಯಿ ಪರಿಹಾರ ಕೋರಿದ್ದರು.
ಸುಪ್ರೀ ತೀರ್ಪು ಅನ್ವಯ ಪರಿಹಾರ:
ಈ ಪ್ರಕರಣ ನಡೆದು 10 ವರ್ಷ ಕಳೆದಿರುವುದರಿಂದ ಮತ್ತು ಅರ್ಜಿದಾರರು ತಮ್ಮ ವಿದ್ಯಾಭ್ಯಾಸವನ್ನು ಬೇರೆ ಕಾಲೇಜುಗಳಲ್ಲಿ ಮುಂದುವರಿಸಿ ಪದವಿ ಪೂರೈಸಿರುವ ಕಾರಣ ಪ್ರವೇಶಾತಿ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎಸ್. ಕೃಷ್ಣ ಶ್ರದ್ಧಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಹಣಕಾಸಿನ ಪರಿಹಾರ ನೀಡಿ ಹೈಕೋರ್ಟ್ ಆದೇಶಿಸಿದೆ. ಅರ್ಜಿದಾರರ ಬದಲಾಗಿ ಸೀಟು ಪಡೆದುಕೊಂಡ ಇಬ್ಬರು ಅಭ್ಯರ್ಥಿಗಳ ವಿರುದ್ಧ ಯಾವುದೇ ಆದೇಶ ನೀಡಲಾಗಿಲ್ಲ.