ಹೈಕೋರ್ಟ್‌ Google
ರಾಜ್ಯ

2 ಸಾವಿರ ರೂ. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹಕ್ಕಲ್ಲ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಮಾಸಿಕ ಎರಡು ಸಾವಿರ ರೂ. ಆರ್ಥಿಕ ನೆರವನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್‌ಗೆ ತಿಳಿಸಿದೆ. ಯೋಜನೆಯ ಅನುಷ್ಠಾನವು ಆಡಳಿತಾತ್ಮಕ ಅನಿವಾರ್ಯತೆಗಳು ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳು ಮಾಸಿಕ ಎರಡು ಸಾವಿರ ರೂ. ಆರ್ಥಿಕ ನೆರವನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಗುರುವಾರ ಹೈಕೋರ್ಟ್‌ಗೆ ತಿಳಿಸಿದೆ. ಯೋಜನೆಯ ಅನುಷ್ಠಾನವು ಆಡಳಿತಾತ್ಮಕ ಅನಿವಾರ್ಯತೆಗಳು ಹಾಗೂ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಒಳಪಟ್ಟಿರುತ್ತದೆ ಎಂದು ಸರ್ಕಾರ ಪ್ರತಿಪಾದಿಸಿದೆ.

ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಮಹಿಳಾ ಫಲಾನುಭವಿಗಳಿಗೆ 2025ರ ಫೆಬ್ರವರಿ ಮತ್ತು ಮಾರ್ಚ್ ಎರಡು ಕಂತುಗಳ ತಲಾ ಎರಡು ಸಾವಿರ ರೂ. ಸಹಾಯಧನದ ಒಟ್ಟು ಐದು ಸಾವಿರ ಕೋಟಿ ರೂ. ಬಾಕಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ಬೆಂಗಳೂರಿನ ಆರ್. ಗಂಗಾ ಮತ್ತು ಜಿ.ಡಿ. ಪವಿತ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ.ಎಸ್. ಭರತ್ ಕುಮಾರ್ ಅವರ ವಿಭಾಗೀಯ ಪೀಠ ನಡೆಸಿತು.

ಕುಟುಂಬ ಮತ್ತು ಆ ಮೂಲಕ ಮಹಿಳೆಯರ ಸಬಲೀಕರಣವನ್ನು ಖಚಿತಪಡಿಸಿಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ. ಆಡಳಿತಾತ್ಮಕ ಅಗತ್ಯತೆಗಳನ್ನು ಆಧರಿಸಿ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ. ಆದ್ದರಿಂದ ಫಲಾನುಭವಿಗಳು ಅದನ್ನು ಹಕ್ಕಿನ ವಿಷಯವೆಂದು ಹೇಳಿಕೊಳ್ಳಲು ಮತ್ತು ನ್ಯಾಯಾಂಗ ಹಸ್ತಕ್ಷೇಪದ ಮೂಲಕ ಯೋಜನೆಯ ಜಾರಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ವಾದಿಸಿದೆ.

ರಾಜ್ಯವು ನೈಜ ಆರ್ಥಿಕ ಸಂಕಷ್ಟದಿಂದಾಗಿ ಸಹಾಯಧನವನ್ನು ಬಿಡುಗಡೆ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ, ಫಲಾನುಭವಿಗಳು ’ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತ’ ಆಧರಿಸಿ ಹಣ ಬಿಡುಗಡೆಗೆ ಒತ್ತಾಯಿಸುವಂತಿಲ್ಲ ಎಂದೂ ಸರ್ಕಾರ ವಾದಿಸಿದೆ.

2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಸಹಾಯಧನವನ್ನು ಆರ್ಥಿಕ ಸಂಕಷ್ಟದ ಕಾರಣದಿಂದ ಬಿಡುಗಡೆ ಮಾಡಿಲ್ಲ ಎಂಬ ಸರ್ಕಾರದ ಒಪ್ಪಿಗೆಯ ಹಿನ್ನೆಲೆಯಲ್ಲಿ ಈ ಆಕ್ಷೇಪಣೆ ಸಲ್ಲಿಸಲಾಗಿದೆ.

ಈ ಎರಡು ತಿಂಗಳ ಸಹಾಯಧನ ಬಿಡುಗಡೆಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿತ್ತು. ಆದರೆ, ಅಗತ್ಯ ಅನುದಾನ ಬಿಡುಗಡೆಯಾಗಿರಲಿಲ್ಲ ಎಂದು ಸರ್ಕಾರ ತನ್ನ ಆಕ್ಷೇಪಣೆಯಲ್ಲಿ ತಿಳಿಸಿದೆ.

ಹೀಗಾಗಿ, ಕಾನೂನಿನ ದೃಷ್ಟಿಯಿಂದ ಅಥವಾ ವಾಸ್ತವಾಂಶಗಳ ಆಧಾರದ ಮೇಲೆ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ವಾದಿಸಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿದೆ.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ತಾರಾನಾಥ್ ಪೂಜಾರಿ ಆಕ್ಷೇಪಣಾ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಸರ್ಕಾರದ ವಾದ ಆಲಿಸಿದ ವಿಭಾಗೀಯ ಪೀಠವು, ಅರ್ಜಿದಾರರ ಪರ ವಕೀಲರಿಗೆ ಸರ್ಕಾರದ ಆಕ್ಷೇಪಣೆಗೆ ಪ್ರತ್ಯುತ್ತರ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಿದೆ.