ಮಳೆ 
ರಾಜ್ಯ

ರಾಜ್ಯದಲ್ಲಿ 2 ದಿನ ಮಳೆ: ಮತ್ತೆ ಹೆಚ್ಚಿದ ಚಳಿ-Rain and cold

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮುಂದಿನ 2 ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರದಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದ್ದು, ಈ ವೇಳೆ ಕೆಲ ಪ್ರದೇಶಗಳಲ್ಲಿ ತುಂತುರು ಮಳೆಯಾಯಿತು.
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮೈಸೂರು ಮತ್ತು ಚಾಮರಾಜನಗರದಲ್ಲಿ ಜ.26, 27ರಂದು ಮೋಡ ಕವಿದ ವಾತಾವರಣದೊಂದಿಗೆ ಹಗುರವಾಗಿ ಮಳೆ ಸುರಿಯಲಿದೆ. ಬೆಂ. ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ,ಧಾರವಾಡ ಮತ್ತು ದಾವಣಗೆರೆ ಸೇರಿ ಉತ್ತರ ಕರ್ನಾಟಕದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮತ್ತೆ ಹೆಚ್ಚಿದ ಚಳಿ:
ರಾಜ್ಯದಲ್ಲಿ ಇಳಿಮುಖವಾಗಿದ್ದ ಚಳಿ 2 ದಿನದಿಂದ ಮತ್ತೆ ಹೆಚ್ಚಳವಾಗಿದೆ. ಮೋಡ ಕವಿದ ವಾತಾವರಣ, ತಂಪಾದ ಗಾಳಿ ಬೀಸುತ್ತಿರುವುದು ಸೇರಿ ಇತರ ಕಾರಣಗಳು ಚಳಿ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ದಾವಣಗೆರೆಯಲ್ಲಿ ಕನಿಷ್ಠ ತಾಪಮಾನದಲ್ಲಿ 11 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ 3 ಡಿ.ಸೆ.ವರೆಗೆ ಕಡಿಮೆಯಾಗಿದ್ದು, ಬೆಳಗ್ಗೆ ಮಂಜುಮಯ ವಾತಾವರಣ ಮುಂದುವರಿದಿದೆ. ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಗರಿಷ್ಠ,ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 18 ಡಿ.ಸೆ.ವರದಿಯಾಗಬಹುದು.