ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿಗಳು
- 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಫಲಿತಾಂಶ ಪ್ರಕಟ
- ಈ ಬಾರಿ ಒಟ್ಟಾರೆ ಶೇಕಡಾ 94.1 ವಿದ್ಯಾರ್ಥಿಗಳು ತೇರ್ಗಡೆ
- ರಾಜ್ಯದ ಏಳು ವಿದ್ಯಾರ್ಥಿಗಳು ಔಟ್ ಆಫ್ ಔಟ್
- 625ಕ್ಕೆ 625 ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಇಲ್ಲಿದೆ ನೋಡಿ
ಬೆಂಗಳೂರು: 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಅಧಿಕೃತವಾಗಿ ಪ್ರಕಟವಾಗಿದೆ. ಈ ಬಾರಿ ಗ್ರಾಮೀಣ ಭಾಗದ ಮಕ್ಕಳಿಂದ ಉತ್ತಮ ಸಾಧನೆ ಲಭಿಸಿದ್ದು, ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಒಟ್ಟಾರೆ ಶೇ. 94.1 ಮಕ್ಕಳು ತೇರ್ಗಡೆಯಾಗಿದ್ದಾರೆ. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ 98.4 ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ ಜಿಲ್ಲೆ 85.06 ರಷ್ಟು ಫಲಿತಾಂಶದೊಂದಿಗೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೇ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಫಲಿತಾಂಶ ಬಂದಿದೆ. ಎಂದಿನಂತೆ ಈ ವರ್ಷವೂ ಬಾಲಕಿಯರದ್ದೇ ಮೇಲುಗೈ ಎಂಬುದು ಗಮನಾರ್ಹ.
ಬೆಂಗಳೂರಿನ ಮಲ್ಲೇಶ್ವರ ಕಚೇರಿಯಲ್ಲಿ ಇಂದು ಬೆಳಗ್ಗೆ 12ಕ್ಕೆ ಮಂಡಳಿಯ ಅಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್‌ಸೈಟ್ http://karresults.nic.inನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಅಲ್ಲದೆ, ಕರ್ನಾಟಕ ಒನ್ ಮೊಬೈಲ್ ಆೃಪ್ ಮೂಲಕವೂ ಪಡೆಯಬಹುದು. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್‌ಎಂಎಸ್ ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗಿದೆ.
ಡಿಜಿಲಾಕರ್‌ನಲ್ಲಿ ಅಂಕಪಟ್ಟಿ ಲಭ್ಯ
ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್‌ನಲ್ಲಿಯೂ ಫಲಿತಾಂಶ ಪ್ರಕಟವಾದ ಕೂಡಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ಡಿಜಿಲಾಕರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು https://www.digilocker.gov.in ಲಿಂಕ್ ಬಳಸಬಹುದು. ಹಾಗೆಯೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೇಗೆ ಡಿಜಿಲಾಕರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲು ಈ ವೀಡಿಯೋ ಲಿಂಕ್ https://tinyurl.com/mw84wmh9 ಮೇಲೆ ಕ್ಲಿಕ್ಕಿಸಿ.
ಒಬ್ಬರಲ್ಲ, ಇಬ್ಬರಲ್ಲ ಒಟ್ಟು 7 ಮಂದಿ ಔಟ್ ಆಫ್ ಔಟ್
ಚಿಕ್ಕೋಡಿಯ ಪ್ರಾರ್ಥನಾ, ದಾವಣಗೆರೆಯ ಭರತ್ ಜಿ, ಚಿಕ್ಕಮಗಳೂರಿನ ಬೃಂದಾ ಎಂ. ತಾಪ್ಸಿ, ಬೆಂಗಳೂರು ಉತ್ತರದಿಂದ ಧನುಷ್ ಸುಧೀರ್ ಮೈಸೂರು, ಉಡುಪಿಯ ಪ್ರೀತಮ್ ಜಿ. ಪೂಜಾರಿ, ವಿಜಯಪುರದ ಸೌಜನ್ಯ ಬಸವರಾಜ್ ಕಂದಕುರ್ ಮತ್ತು ರಾಯಚೂರಿನ ಸುಖದೇವ 625ಕ್ಕೆ 625 ಅಂಕ ಗಳಿಸಿದ ಟಾಪರ್ ವಿದ್ಯಾರ್ಥಿಗಳು. ತಮ್ಮ ಶಾಲೆಗೆ, ಹೆತ್ತವರಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಈ ವಿದ್ಯಾರ್ಥಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಯಾವ ಶಾಲೆಯ ವಿದ್ಯಾರ್ಥಿಗಳು ಎಂಬುದರ ಪಟ್ಟಿ ಇಲ್ಲಿದೆ ನೋಡಿ
ಯಾವ ಜಿಲ್ಲೆ ಪ್ರಥಮ, ಕೊನೆ ಸ್ಥಾನಗಳ ಪಟ್ಟಿ