ಬಸವಕಲ್ಯಾಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ವಿಚ್ಛೇದನ ಬಯಸಿದ ದಂಪತಿ ರಾಜಿ ಸಂದಾನದ ಮೂಲಕ ಮತ್ತೆ ಒಂದಾದರು.
- ಬಸವಕಲ್ಯಾಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್
ಬಸವಕಲ್ಯಾಣ: ನಗರದ ನ್ಯಾಯಾಲಯದ ಆವಣದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನಾಲ್ಕು ನ್ಯಾಯಾಲಯಗಳಲ್ಲಿ ಒಟ್ಟು 2685 ಪ್ರಕರಣಗಳ ಪೈಕಿ ನ್ಯಾಯಾಧೀಶರ ಸಮಕ್ಷಮದಲ್ಲಿ ರಾಜಿ ಸಂಧಾನ ಮೂಲಕ 1925 ಪ್ರಕರಣ ಇತ್ಯರ್ಥಗೊಳಿಸಲಾಯಿತು.
ಕೌಟುಂಬಿಕ ಕಲಹ, ಆಸ್ತಿ ಸಂಬಂಧ ಅಣ್ಣ&ತಮ್ಮರ ನಡುವೆ ನಡೆಯುತ್ತಿದ್ದ ಪ್ರಕರಣಗಳು, ಮೋಟಾರು ವಾಹನ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣ ಸೇರಿ ನಾನಾ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಲೋಕ ಅದಾಲತ್ನಲ್ಲಿ ಇತ್ಯರ್ಥಪಡಿಸಲಾಗಿದೆ.
ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ 1770 ಪ್ರಕರಣ, ಆರ್ಟಿಒ ಇಲಾಖೆಗೆ ಸೇರಿದ 1, ನಗರಸಭೆಗೆ ಸಂಬಂಧಿಸಿದ 79 ಪ್ರಕರಣ, 65 ಬ್ಯಾಂಕ್ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಒಟ್ಟು 2.35 ಕೋಟಿ 54323 ರೂ. ದಂಡದ ವಿಧಿಸಲಾಗಿದೆ. ಮದುವೆಯಾದ ಮೂರು ವರ್ಷದಲ್ಲಿಯೇ ಕ್ಷುಲ್ಲಕ ಕಾರಣಕ್ಕಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗೆ ಮನವೊಲಿಸಿ ಒಂದು ಮಾಡಲಾಯಿತು.
ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಶವಂತ ಆರ್. ತವಾರೆ ಮಾತನಾಡಿ, ಸಣ್ಣ, ಸಣ್ಣ ವಿಷಯಗಳಿಗೆ ಜಗಳ, ಮನಸ್ತಾಪದಿಂದ ನ್ಯಾಯಾಲದ ಮೆಟ್ಟಿಲು ಹತ್ತಿ ಹಣ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳುವುದು ಸರಿಯಲ್ಲ, ಪರಸ್ಪರ ಸಹಕಾರ ಹಾಗೂ ತಿಳಿವಳಿಕೆಯೊಂದಿಗೆ ಜೀವನ ನಡೆಸಿದಲ್ಲಿ ನೆಮ್ಮದಿಯಿಂದ ಬದುಕಬಹುದು ಎಂದರು.
ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಹಣಮಂತರಾವ ಕುಲ್ಕರ್ಣಿ, ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಜ್ಞಾನೇಶ್ವರ ವಿಠ್ಠಲ್ ಮಾಳಗಿ, ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಶ್ರೇಯಾ ಎಸ್ ಉತ್ತ್ತುರೆ, ಸರ್ಕಾರಿ ಅಭಿಯೋಜಕ ಬಸವಂತರಡ್ಡಿ, ಸರ್ಕಾರಿ ಸಹಾಯಕ ಅಭಿಯೋಜಕರಾದ ಬಾಲಾಜಿ ಅದೆಪ್ಪ, ಜಗದೇವಿ ಚೊಂಡೆ, ಅರವಿಂದ ಸಿಂಗೋಡೆ, ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಭೀಮಾಶಂಕರ ಕುರಕೊಟೆ ಇತರರಿದ್ದರು.